HD Kumarswamy ತೆರಳಿದ್ದ ವೇಳೆ ನಂಜನಗೂಡು ಪ್ರವಾಸಿ ಮಂದಿರಕ್ಕೆ ಬೀಗ

ಮೈಸೂರು: ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಇಂದು ನಂಜನಗೂಡು ದೇವಾಲಯಕ್ಕೆ ಆಗಮಿಸಿದ ಸಂದರ್ಭದಲ್ಲಿ ವಿಶ್ರಾಂತಿಗೆಂದು ಅಲ್ಲಿನ ಪ್ರವಾಸಿ ಮಂದಿರಕ್ಕೆ ತೆರಳಿದಾಗ ಅಧಿಕಾರಿಗಳು ಪ್ರವಾಸಿ ಮಂದಿರದ ಬೀಗ ತೆರೆಯದ ಪ್ರಸಂಗ ನಡೆಯಿತು.

ಕುಮಾರಸ್ವಾಮಿ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ನಂಜನಗೂಡು ದೇವಾಲಯಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ವಿಶ್ರಾಂತಿಗಾಗಿ ನಂಜನಗೂಡಿನ ಪ್ರವಾಸಿ ಮಂದಿರಕ್ಕೆ ಹೋದಾಗ ಅಲ್ಲಿ ಅಧಿಕಾರಿಗಳು ಬೀಗ ತೆಗೆದಿರಲಿಲ್ಲ. ಬಳಿಕ ಅಲ್ಲೇ 10 ನಿಮಿಷ ಕಾದರೂ ಸಹ ಸಿಬ್ಬಂದಿ ಬಾಗಿಲು ತೆಗೆಯದೇ ಇದ್ದ ಕಾರಣ ಕುಮಾರಸ್ವಾಮಿ ವಾಪಸಾದರು. ಪ್ರವಾಸಿ ಮಂದಿರ ಅಧಿಕಾರಿಗಳಿಗೆ ಮೊದಲೇ ಕೇಂದ್ರ ಸಚಿವರ ಭೇಟಿ ವಿಚಾರವನ್ನು ತಿಳಿಸಿದ್ದರೂ ಸಹ ಈ ರೀತಿಯ ನಡೆಗೆ ಮಾಜಿ ಸಚಿವ ಸಾ.ರಾ.ಮಹೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಇಂಥವೆಲ್ಲ ನಡೀತಿರುತ್ತವೆ’- ಕುಮಾರಸ್ವಾಮಿ: ಈ ಘಟನೆ ಬಗ್ಗೆ ಮಾಧ್ಯಮದವರು ಹೆಚ್​ಡಿಕೆ ಅವರನ್ನು ಪ್ರಶ್ನಿಸಿದಾಗ, “ಬಿಡಿ ಇಂಥವೆಲ್ಲಾ ರಾಜಕೀಯದಲ್ಲಿ ನಡೀತಿರುತ್ತವೆ. ನಾನು ಇದಕ್ಕೆ ಪ್ರಾಮುಖ್ಯತೆ ನೀಡುವುದಿಲ್ಲ” ಎಂದರು.

ತಪ್ಪಿತಸ್ಥರ ವಿರುದ್ಧ ಕ್ರಮ ಎಂದ ಜಿಲ್ಲಾಧಿಕಾರಿ: ಈ ವಿಚಾರ ಮಾಧ್ಯಮದಲ್ಲಿ ಬಿತ್ತರವಾಗುತ್ತಿದ್ದಂತೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ಕಚೇರಿಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ. ನಂಜನಗೂಡು ಶ್ರೀಕಂಠೇಶ್ವರ ದೇವಾಲಯಕ್ಕೆ ಕೇಂದ್ರ ಸಚಿವ ಹೆಚ್.​ಡಿ.ಕುಮಾರಸ್ವಾಮಿ ಭೇಟಿ ನೀಡಿ ನಂಜನಗೂಡಿನ ಸರ್ಕಾರಿ ಅತಿಥಿಗೃಹದಲ್ಲಿ ಲಘು ವಿಶ್ರಾಂತಿಗಾಗಿ ತೆರಳಿದಾಗ ಅತಿಥಿಗೃಹಕ್ಕೆ ಬೀಗ ಹಾಕಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿರುವುದು ಕಂಡುಬಂದಿದೆ. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಗಂಭೀರವಾಗಿ ಪರಿಗಣಿಸಿ ವಿಚಾರಣೆ ಮಾಡಲಾಗುತ್ತಿದೆ. ಕರ್ತವ್ಯ ಲೋಪದಡಿ ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲು ಕ್ರಮ ಕೈಕೊಳ್ಳಲಾಗುವುದು ಎಂದು ತಿಳಿಸಿದೆ.

Leave a Reply

Your email address will not be published. Required fields are marked *