269 ಮರಗಳ ಕಡಿತಕ್ಕೆ ರೈಲ್ವೆ ಸಿದ್ಧತೆ.
ಬೆಂಗಳೂರು : ಬೈಯಪ್ಪನಹಳ್ಳಿ ಬಳಿಯ ಸರ್ಎಂ ವಿಶ್ವೇಶ್ವರಯ್ಯ ರೈಲ್ವೆ ಸ್ಟೇಷನ್ನಲ್ಲಿ ಅಭಿವೃದ್ಧಿ ಕಾಮಗಾರಿಗಾಗಿ ಬರೋಬ್ಬರಿ 269 ಮರಗಳನ್ನು ಕಡಿಯಲು ರೈಲ್ವೆ ಇಲಾಖೆ ಮುಂದಾಗುತ್ತಿದೆ. ಇದಕ್ಕೆ ಪರಿಸರ ಹೋರಾಟಗಾರರಿಂದ ಆಕ್ಷೇಪ ವ್ಯಕ್ತವಾಗಿದೆ. ಬೈಯಪ್ಪನಹಳ್ಳಿಯಲ್ಲಿರುವ ಎಸ್ಎಂವಿಟಿ ರೈಲ್ವೆ ನಿಲ್ದಾಣದಲ್ಲಿರುವ 269 ಮರಗಳು ಹತ್ತಾರು ವರ್ಷಗಳ ಹಳೆಯದ್ದಾಗಿವೆ. ಅವುಗಳು ಬೃಹತ್ ಮರಗಳಾಗಿದ್ದು, ಹಾಗಾಗಿ ಯಾವುದೇ ಕಾರಣಕ್ಕೂ ಅವುಗಳನ್ನು ಕಡಿಯಬಾರದು ಎಂದು ಪರಿಸರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಮರಗಳನ್ನು ಕಡಿಯಲು ಮುಂದಾದರೆ ರೈಲು ನಿಲ್ದಾಣದ ಎದುರು ಬೃಹತ್ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಆದರೆ, ರೈಲ್ವೆ ಇಲಾಖೆ ಮಾತ್ರ ಯಾವುದನ್ನೂ ಲೆಕ್ಕಿಸದೆ ಮರಗಳನ್ನು ಕಡಿಯಲು ಸಿದ್ದತೆ ಮಾಡಿಕೊಂಡಿದೆ.
ರೈಲ್ವೆ ಕೋಚ್ಗಳ ತಪಾಸಣೆ ಮತ್ತು ನಿರ್ವಹಣೆ ಮಾಡುವುದಕ್ಕಾಗಿ ರೈಲ್ವೆ ಡಿಪೋ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಮುಂದಾಗಿದೆ. ಇಲಾಖೆ ಉದ್ದೇಶಿಸಿರುವ ಅದೇ ಜಾಗದಲ್ಲಿ 269 ಮರಗಳಿವೆ. ಹೀಗಾಗಿ ಆ ಮರಗಳನ್ನು ಕಡಿದು ಕಾಮಗಾರಿ ಮಾಡಲು ರೈಲ್ವೆ ಇಲಾಖೆ ತೀರ್ಮಾನ ಮಾಡಿದೆ. ಇದಕ್ಕೆ ಈಗ ಸ್ಥಳೀಯರಿಂದಲೂ ಅಸಮಾಧಾನ ವ್ಯಕ್ತವಾಗಿದೆ.
ಒಟ್ಟಿನಲ್ಲಿ, ಅಭಿವೃದ್ಧಿ ಅನ್ನೋ ಹೆಸರಿನಲ್ಲಿ ಮರಗಳನ್ನು ಕಡಿಯುತ್ತಾ ಹೋದರೆ ಗಾರ್ಡನ್ ಸಿಟಿ ಹೋಗಿ ಕಾಂಕ್ರೀಟ್ ಜಂಗಲ್ ಆಗುವುದರಲ್ಲಿ ಅನುಮಾನವಿಲ್ಲ ಎಂಬ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗಿದೆ.
For More Updates Join our WhatsApp Group :




