ನವದೆಹಲಿ: ಬೆಳಗ್ಗೆ ಜಾಗಿಂಗ್ಗೆಂದು ತೆರಳಿದ್ದ ಕಾಂಗ್ರೆಸ್ ಸಂಸದೆ ಸುಧಾರಿಂದ ಸರ ದೋಚಿ ಪರಾರಿಯಾಗಿದ್ದ ಕಳ್ಳಸಿಕ್ಕಿಬಿದ್ದಿದ್ದಾನೆ, ಸರವೂ ವಾಪಸ್ ಸಿಕ್ಕಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆಗಸ್ಟ್ 4 ರಂದು ದೆಹಲಿಯ ಹೆಚ್ಚಿನ ಭದ್ರತೆಯ ಚಾಣಕ್ಯಪುರಿ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಚೈನ್ ಕಸಿದುಕೊಂಡು ಪರಾರಿಯಾಗಿದ್ದ, ಈ ಘಟನೆಯಲ್ಲಿ ಸುಧಾ ಅವರು ಗಾಯಗೊಂಡಿದ್ದರು, ಅವರ ಬಟ್ಟೆಯೂ ಕೂಡ ಹರಿದಿತ್ತು.
ದೆಹಲಿ ಪೊಲೀಸರ ಹಲವಾರು ತಂಡಗಳು ತನಿಖೆಯಲ್ಲಿ ತೊಡಗಿದ್ದವು ಮತ್ತು ಆರೋಪಿಯನ್ನು ಬಂಧಿಸಲಾಯಿತು, ಅವನು ಓಖ್ಲಾ ನಿವಾಸಿ ಎಂದು ತಿಳಿದುಬಂದಿದೆ. ಬೆಳಗ್ಗೆ 6.15ರ ಸುಮಾರಿಗೆ ಘಟನೆ ನಡೆದಿದೆ. ಆ ವ್ಯಕ್ತಿ ಹೆಲ್ಮೆಟ್ ಧರಿಸಿದ್ದ, ನಿಧಾನವಾಗಿ ತನ್ನ ಎದುರು ಬರುತ್ತಿದ್ದ ಹಾಗಾಗಿ ಅನುಮಾನ ಬಂದಿರಲಿಲ್ಲ. ಅವನು ಹತ್ತಿರ ಬಂದ ತಕ್ಷಣ ಸರ ಕಸಿದುಕೊಂಡು ಓಡಿಹೋದ. ಘಟನೆಯಲ್ಲಿ ಸುಧಾ ಅವರ ಕುತ್ತಿಗೆಯಲ್ಲಿ ಗಾಯಗಳಾಗಿವೆ ಮತ್ತು ಅವರ ಚೂಡಿದಾರ್ ಕೂಡ ಹರಿದಿದೆ.
2024ರ ತಮ್ಮ ಅಫಿಡವಿಟ್ನಲ್ಲಿ ಸುಧಾ ತಮ್ಮ ಬಳಿ 480 ಗ್ರಾಂ ಚಿನ್ನವಿದೆ ಎಂದು ಹೇಳಿಕೊಂಡಿದ್ದರು. ಅದರ ಮೌಲ್ಯ 27 ಲಕ್ಷ ರೂ. ಎಂದು ಹೇಳಿದ್ದರು. ಅವರ ಬಳಿ 37 ಲಕ್ಷಕ್ಕೂ ಹೆಚ್ಚು ಆಸ್ತಿ ಇದೆ. ಅಲ್ಲದೆ, ಅವರ ವಿರುದ್ಧ 10 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇಲ್ಲಿಯವರೆಗೆ ಅಂತಿಮಗೊಳಿಸಲಾದ ಎಲ್ಲಾ ಪ್ರಕರಣಗಳಲ್ಲಿ ಅವರು ತಪ್ಪಿತಸ್ಥರೆಂದು ಸಾಬೀತಾಗಿಲ್ಲ ಎಂದು ಅವರು ಬಹಿರಂಗಪಡಿಸಿದ್ದರು.
ಸಂಸದೆ ಸುಧಾ ಈ ಕುರಿತು ಮಾತನಾಡಿ, ಈ ಘಟನೆ ತುಂಬಾ ಆಘಾತಕಾರಿಯಾಗಿದೆ. ದೇಶದ ರಾಜಧಾನಿಯ ಈ ಅತ್ಯಂತ ಸುರಕ್ಷಿತ ಪ್ರದೇಶದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲದಿದ್ದರೆ,ದೇಶದ ಉಳಿದ ಭಾಗಗಳಲ್ಲಿ ನಾವು ಸುರಕ್ಷತೆಯನ್ನು ಎಲ್ಲಿ ನಿರೀಕ್ಷಿಸಬಹುದು ಎಂದು ಪ್ರಶ್ನಿಸಿದ್ದಾರೆ. ಈ ಘಟನೆಯ ಬಗ್ಗೆ ಸುಧಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ನೀಡಿದ್ದಾರೆ. ಈ ವಿಷಯದಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಪೊಲೀಸರನ್ನು ಸಂಪರ್ಕಿಸಿ ಅಪರಾಧಿಯನ್ನು ಶೀಘ್ರದಲ್ಲೇ ಬಂಧಿಸುವಂತೆ ಮನವಿ ಮಾಡಿದ್ದರು.
ತಮಿಳುನಾಡಿನ ಮೈಲಾಡುತುರೈ ಕ್ಷೇತ್ರದ ಸಂಸದೆ ಸುಧಾ, ಸಂಸದರಿಗೆ ಅಧಿಕೃತ ವಸತಿ ಸೌಕರ್ಯ ಇನ್ನೂ ಹಂಚಿಕೆಯಾಗದ ಕಾರಣ ಕಳೆದ ಒಂದು ವರ್ಷದಿಂದ ತಮಿಳುನಾಡು ಹೌಸ್ನಲ್ಲಿ ವಾಸಿಸುತ್ತಿದ್ದಾರೆ. ಈ ಘಟನೆ ವಿವಿಐಪಿ ಚಾಣಕ್ಯಪುರಿ ಪ್ರದೇಶದಲ್ಲಿ ನಡೆದಿದೆ.
For More Updates Join our WhatsApp Group :