Karnataka Politics Heat Up: “ನನ್ನ ವಜಾ ಹಿಂದೆ ದೊಡ್ಡ ಷಡ್ಯಂತ್ರ” – ಕೆ.ಎನ್. ರಾಜಣ್ಣ

kn rajanna resignn

ಬೆಂಗಳೂರು: ನನ್ನನ್ನು ಸಂಪುಟದಿಂದ ವಜಾ ಮಾಡಿರುವ ಹಿಂದೆ ದೊಡ್ಡ ಷಡ್ಯಂತ್ರ, ಪಿತೂರಿ ಇದೆ ಎಂದು ಪದಚ್ಯುತ ಸಚಿವ ಕೆ.ಎನ್.ರಾಜಣ್ಣ ಗಂಭೀರ ಆರೋಪ ಮಾಡಿದ್ದಾರೆ.

ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ಎಲ್ಲರಿಗೂ ಸಂಜೆಯ ನಮಸ್ಕಾರ ಮಾಜಿ ಸಚಿವನಾಗಿ ಮಾತಾಡುತ್ತಿದ್ದೇನೆ. ಮಾಜಿ ಸಚಿವ ಎಂದು ಕರೆಸಿಕೊಳ್ಳಲು ನನಗೆ ಸಂತೋಷ ಇದೆ. ಈ ಪಿತೂರಿ ಹಿಂದೆ ಯಾರು ಯಾರು ಇದ್ದಾರೆ?, ಏನೇನು ನಡೆದಿದೆ?. ಎಲ್ಲೆಲ್ಲಿ ನಡೆದಿದೆ?. ಎಲ್ಲೆಲ್ಲಿ ಯಾವ ಮುಖಂಡರ ಜೊತೆ ಏನೇನು ನಡೆದಿದೆ ಎಂಬ ಬಗ್ಗೆ ಎಲ್ಲವನ್ನೂ ಕಾಲ ಬಂದಾಗ ತಿಳಿಸುತ್ತೇನೆ’ ಎಂದು ಹೇಳಿದರು.

ನಮ್ಮ ನಾಯಕರಾದ ರಾಹುಲ್ ಗಾಂಧಿ, ವೇಣುಗೋಪಾಲ್, ನಮ್ಮ ಅಧ್ಯಕ್ಷರಿಗೆ ತಪ್ಪು ಗ್ರಹಿಕೆ ಆಗಿದೆ ಎಂಬುದು ನನ್ನ ಅನಿಸಿಕೆ‌. ಆ ತಪ್ಪು ಗ್ರಹಿಕೆ ನಿವಾರಣೆ ಮಾಡಲು ಹೈಕಮಾಂಡ್ ನಾಯಕರ ಭೇಟಿಗೆ ದೆಹಲಿಗೆ ಹೋಗುತ್ತೇನೆ. ತಪ್ಪು ಗ್ರಹಿಕೆಯನ್ನು ನಿವಾರಣೆ ಮಾಡಲು ಪ್ರಯತ್ನ ಮಾಡುತ್ತೇನೆ. ನಾವು ಏನೇ ಮಾತನಾಡಿದರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಿದ್ದೇವೆ.‌ ರಾಹುಲ್ ಗಾಂಧಿ ಅವರು ಈ ದೇಶದ ನಾಯಕರು. ಅವರು ಮಾಡಿದ ಮತಗಳ್ಳತನದ ಹೋರಾಟಕ್ಕೆ ನಮ್ನೆಲ್ಲರ ಬೆಂಬಲ ಇದೆ. ಅವರ ಮಾರ್ಗದರ್ಶನದಂತೆ ನಾವು ಮುಂದೆ ನಡೆದುಕೊಳ್ಳುತ್ತೇವೆ ಎಂದರು.

ನನ್ನನ್ನು ಸಚಿವನನ್ನಾಗಿ ಮಾಡಿದ ಸಿಎಂ ಸಿದ್ದರಾಮಯ್ಯ ಅವರಿಗೆ ನಾನು ಧನ್ಯವಾದ ಅರ್ಪಿಸಿದ್ದೇನೆ.‌ ಸಚಿವ ಸತೀಶ್ ಜಾರಕಿಹೊಳಿ, ಚೆಲುವರಾಯಸ್ವಾಮಿ, ಸುಧಾಕರ್ ಎಲ್ಲರೂ ಹೋಗಿ ಸಿಎಂ ಅವರನ್ನು ಭೇಟಿಯಾಗಿದ್ದೇವೆ. ನನ್ನನ್ನು ಸಂಪುಟದಿಂದ ಕೈ ಬಿಡಬೇಕು ಎಂಬುದು ಹೈಕಮಾಂಡ್ ಸೂಚನೆಯಾಗಿತ್ತು. ಅದರಂತೆ ಸಿಎಂ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅದರಂತೆ ಸಂಪುಟದಿಂದ ನನ್ನನ್ನು ಕೈ ಬಿಡಲಾಗಿದೆ. ಇದು ಪಕ್ಷದ ತೀರ್ಮಾನವಾಗಿದೆ. ಅದನ್ನು ಈ ಸಂದರ್ಭದಲ್ಲಿ ಪ್ರಶ್ನೆ ಮಾಡುವುದು ಸಾಧುವಲ್ಲ ಎಂದು ತಿಳಿಸಿದರು.

ಪಕ್ಷಕ್ಕೆ ಮುಜುಗರ ಮಾಡಬಾರದು ಎಂಬ ದೃಷ್ಡಿಯಿಂದ ನಾನು ಹೆಚ್ಚಿನ ವಿವರಣೆಯನ್ನು ಹೇಳಲು ಹೋಗುವುದಿಲ್ಲ. ರಾಹುಲ್ ಗಾಂಧಿ ಈ ದೇಶದ ನಾಯಕ. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವೆ. ಮುಂದೆ ಎಲ್ಲವನ್ನೂ ಸರಿಯಾಗಿ ತಿಳಿಸುವೆ ಎಂದು ಪ್ರತಿಕ್ರಿಯೆ ನೀಡಿದರು.

Leave a Reply

Your email address will not be published. Required fields are marked *