ಬೆಂಗಳೂರು: ಜೂನ್ 17 ರಂದು ಈದ್ ಅಲ್-ಅಧಾ (ಬಕ್ರೀದ್) ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಬಲಿ ನೀಡುವ ಜಾನುವಾರುಗಳ ಬೆಲೆ ಏರಿಕೆಯಾಗಿದೆ. ಆದರೆ, ಮೇಕೆಗಳಿಗೆ ಹೋಲಿಸಿದರೆ ಈ ವರ್ಷ ಕುರಿಗಳಿಗೆ ಬೇಡಿಕೆ ಕುಸಿದಿರುವುದು ರೈತರಲ್ಲಿ ಬೇಸರ ತರಿಸಿದೆ.
ಗ್ರಾಮೀಣ ಭಾಗದಲ್ಲಿನ ಬಹುತೇಕ ರೈತರು ಕೃಷಿ ಮತ್ತು ತೋಟಗಾರಿಕೆ ಜೊತೆಯಲ್ಲಿ ಉಪಕಸುಬುಗಳಾದ ಹೈನುಗಾರಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿರುವುದು ಸಾಮಾನ್ಯ. ಬಡ ರೈತರ ಪಾಲಿಗೆ ಕುರಿ ಮತ್ತು ಮೇಕೆ ಸಾಕಾಣೆ ಆರ್ಥಿಕತೆಯ ಮೂಲಗಳಾಗಿವೆ.
ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದಾಗ, ತೋಟಗಳಲ್ಲಿ ಬೆಳೆ ಬಿತ್ತನೆ ಮಾಡುವ ಸಮಯದಲ್ಲಿ, ಮದುವೆಗಳ ಸಮಯದಲ್ಲಿ ಹಣದ ಕೊರತೆ ಎದುರಾದಾಗ ತಾವು ಸಾಕಾಣಿಕೆ ಮಾಡಿರುವ ಕುರಿ, ಮೇಕೆ ಮಾರಾಟ ಮಾಡಿ ತಮ್ಮ ಆರ್ಥಿಕ ಕೊರತೆಗಳನ್ನು ನೀಗಿಸಿಕೊಳ್ಳುತ್ತಾರೆ.
ಜೂನ್ 17 ರಂದು ಬಕ್ರೀದ್ ಹಬ್ಬದ ಹಿನ್ನೆಲೆ ಕುರಿ, ಮೇಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದ್ದು, ಬೆಲೆ ಗಗನಕ್ಕೇರಿದೆ. 18-19 ಕೆಜಿ ತೂಕದ ಮೇಕೆಗಳ ಬೆಲೆ 20,000 ರೂ.ಗೆ ಏರಿಕೆಯಾಗಿದೆ.