ಬೆಂಗಳೂರು: ಗ್ಯಾರಂಟಿ ಯೋಜನೆಗಳು(Guarantee Scheme) ರಾಜ್ಯದಲ್ಲಿ ಮುಂದುವರೆಯುತ್ತವೆ. ಗ್ಯಾರಂಟಿ ಯೋಜನೆಗಳಿಂದ ದಿವಾಳಿಯಾಗುತ್ತದೆ ಎಂದು ಭವಿಷ್ಯ ನುಡಿದವರಿಗೆ ಉತ್ತರ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಆರ್ಥಿಕ ಬೆಳವಣೆಗಯನ್ನ ಸಾಧಿಸಿ ಉತ್ತರ ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಗುರುವಾರ ಹೇಳಿದರು.
78ನೇ ಸ್ವಾತಂತ್ರ್ಯ ದಿನಾಚರಣೆ (Independence day) ಹಿನ್ನೆಲೆಯಲ್ಲಿ ನಗರದ ಮಾಣಿಕ್ ಶಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿಗಳು ಜನತೆಯನ್ನುದ್ದೇಶಿಸಿ ಭಾಷಣ ಮಾಡಿದರು.
ಭಾಷಣದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರನ್ನು ಮೆರೆಯಲಾಗದು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಬಲಿದಾನಕ್ಕೆ ಬೆಲೆಕಟ್ಟಲಾಗದು ಎಂದು ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು.
ಸರ್ಕಾರದ(Government) ಗ್ಯಾರಂಟಿ ಗಳಿಂದ ಪ್ರತಿಯೊಬ್ಬ ಫಲಾನುಭವಿಗೆ ಅನುಕೂಲ ಆಗಿದೆ. ಸುಮಾರು 4 ರಿಂದ 5 ಸಾವಿರ ರೂಪಾಯಿ ಲಭಿಸುತ್ತಿದೆ. ಇದರಿಂದ ಅನೇಕ ಬಡಕುಟುಂಬಗಳಿಗೆ ಅನುಕೂಲವಾಗಿದೆ. ಈ ಯೋಜನೆಗಳು ರಾಜ್ಯದಲ್ಲಿ ಮುಂದುವರೆಯುತ್ತಿದೆ. ಇದರಿಂದ ದಿವಾಳಿಯಾಗುತ್ತದೆ ಎಂದು ಭವಿಷ್ಯ ನುಡಿದವರಿಗೆ ಉತ್ತರ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಆರ್ಥಿಕ ಬೆಳವಣೆಗಯನ್ನ ಸಾಧಿಸಿ ಉತ್ತರ ನೀಡುತ್ತೇವೆ ಎಂದು ಹೇಳಿದರು.
ಇದೇ ವೇಳೆ ಕೇಂದ್ರ ಸರ್ಕಾರದ ತಾರತಮ್ಯ ವಿರುದ್ಧ ಮುಖ್ಯಮಂತ್ರಿಗಳು ಆಕ್ರೋಶದ ಭಾಷಣ ಮಾಡಿದರು.
ಜನಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ರಾಜ್ಯದ ಜವಬ್ದಾರಿಯಾದರೆ. ಇವುಗಳಿಗೆ ಪೂರಕ ಸಂಪನ್ಮೂಲ ಒದಿಗಿಸುವುದು ಕೇಂದ್ರದ ಹೊಣೆಗಾರಿಕೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಕೇಂದ್ರ ಸರ್ಕಾರ ಈ ಆಶಯದಿಂದ ದೂರ ಸರಿಯುತ್ತಿದೆ. ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ. ಸಂವಿಧಾನದ ಆಶಯಗಳನ್ನು ನಿರ್ಲಕ್ಷಿಸಿ ರಾಜ್ಯಗಳಿಗೆ ದೊರೆಯಬೇಕಾದ ಹಣಕಾಸಿನ ಪಾಲನ್ನು ನೀಡಲು ಮೀನಾಮೇಷ ಎಣಿಸುತ್ತಿದೆ. ಕೇಂದ್ರದಿಂದ ಪರಿಹಾರ ಮೊತ್ತ ಪಡೆಯಲು ನ್ಯಾಯಾಲಯದ ಮೊರೆ ಹೋಗುವ ಅನಿವಾರ್ಯತೆ ಎದುರಾಗಿದೆ. ಇದು ಜನಹಿತಕ್ಕೆ ಒಳ್ಳೆಯದಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಹೀಗಾಗಿ ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಈ ಸಂದರ್ಭದಲ್ಲಿ ಸಮಸ್ತ ನಾಡ ಬಂಧುಗಳ ಪರವಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತಮ್ಮ ರಾಜಕೀಯ ಪ್ರಬುದ್ಧತೆ ಮೆರೆದಿದ್ದಾರೆ ಮತದಾರರು. ಪ್ರಜಾಪ್ರಭುತ್ವ ಯಾರ ಕೈಗೊಂಬೆಯಾಗಲು ಸಾಧ್ಯವಿಲ್ಲ ಎಂಬ ಸಂದೇಶ ನೀಡಿದ್ದಾರೆ. ಜನತೆಯ ತೀರ್ಪನ್ನು ಧಿಕ್ಕರಿಸಿ ನಡೆಸುವ ಹಿಂಬಾಗಿಲ ರಾಜಕಾರಣವನ್ನು ಇತಿಹಾಸದಲ್ಲಿ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದರು.