ಬೆಂಗಳೂರು : ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ಮಧ್ಯೆ ಕಾಂಗ್ರೆಸ್ಸಿನ ಹೈಕಮಾಂಡ್ ಮಟ್ಟದಲ್ಲಿ ಸಿಎಂ ಕುರ್ಚಿ ವಿಷಯದಲ್ಲಿ ಎರಡೂವರೆ ವರ್ಷ ಎಂಬ ಒಪ್ಪಂದ ಆಗಿದೆ ಎಂದು ಕಾಂಗ್ರೆಸ್ ಮುಖಂಡರೇ ಹೇಳುತ್ತಾರೆ. ಈಗ ರಾಜೀನಾಮೆ ಕೊಡಲೇಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ನವೆಂಬರ್ನಲ್ಲಿ ರಾಜ್ಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆಯುವುದು ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.

ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರ ನೀಡಿದರು. ತಂತ್ರ- ಕುತಂತ್ರಗಳಿಗೆ ಅದರದೇ ಆದ ಇತಿಮಿತಿ ಇರುತ್ತದೆ. ಸರ್ಕಾರ ಬಂದು ಎರಡೂವರೆ ವರ್ಷ ಆಗಿದೆ. ಇವರೇನು ಸಾಧನೆ ಮಾಡಿದ್ದಾರೆ. ರಾಜ್ಯದ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಗ್ಯಾರಂಟಿಗಳಿಗೆ ಹಣ ಸಂಗ್ರಹವಾಗದೆ ಜಿಎಸ್ಟಿ ಮೂಲಕ ಬೀದಿ ವ್ಯಾಪಾರಿಗಳಿಗೂ ಬರೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಬಿಜೆಪಿ ವಿಪಕ್ಷವಾಗಿ ಸಮರ್ಥವಾಗಿ ಕೆಲಸ ಮಾಡುತ್ತಿದೆ. ನಮಗೆ ಸಂತೃಪ್ತಿ ಇದೆ ಎಂದು ಹೇಳಿದರು.
ಬಿಜೆಪಿ, ರಾಮನಾಥ ಕೋವಿಂದ್ ಅವರನ್ನು ಗೌರವಾನ್ವಿತ ರಾಷ್ಟ್ರಪತಿಗಳನ್ನಾಗಿ ಮಾಡಿದೆ. ಈಗ ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಅವರನ್ನು ಮಾನ್ಯ ರಾಷ್ಟ್ರಪತಿಗಳನ್ನಾಗಿ ಮಾಡಿದ್ದೇವೆ ಎಂದ ಅವರು, ಕಾಂಗ್ರೆಸ್, ಗಾಂಧಿ ಕುಟುಂಬವು ಹಿಂದೆ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರನ್ನು ಅಪಮಾನ ಮಾಡಿ ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಿತ್ತು. ಇದನ್ನು ಸಿದ್ದರಾಮಯ್ಯನವರು ಮರೆತಿದ್ದರೂ ರಾಜ್ಯದ ಜನರು ಮರೆತಿಲ್ಲ. ದೇವರಾಜ ಅರಸು ಅವರ ದಾಖಲೆಯನ್ನು ಮುರಿಯಬೇಕೆಂದು ಹಪಾಹಪಿ ಸಿದ್ದರಾಮಯ್ಯನವರಲ್ಲಿದೆ. ದೇವರಾಜ ಅರಸು ಅವರಿಗೆ ಕಾಂಗ್ರೆಸ್ ಪಕ್ಷ ಮಾಡಿದ ಅಪಮಾನವನ್ನು ಸಿದ್ದರಾಮಯ್ಯನವರು ನೆನಪಿಸಿಕೊಳ್ಳಲಿ ಎಂದರು. ಸಿದ್ದರಾಮಯ್ಯನವರು ತಮ್ಮ ಕುರ್ಚಿ ಉಳಿವಿಗೆ ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ಅಲ್ಲದೇ ಅಹಿಂದ ಜನರ ಭಜನೆ ಮಾಡುತ್ತಿದ್ದು, ನಿಮ್ಮ ಮುಖವಾಡ ಇವತ್ತು ಕಳಚಿ ಬಿದ್ದಿದೆ. ಅಹಿಂದ ಸಮುದಾಯಗಳಿಗೆ ಸಿದ್ದರಾಮಯ್ಯನವರು ಯಾವುದೇ ರೀತಿಯ ನ್ಯಾಯ ಕೊಡಲು ಸಾಧ್ಯವಾಗಿಲ್ಲ. ತಮ್ಮ ಮುಖ್ಯಮಂತ್ರಿ ಕುರ್ಚಿ ಉಳಿವಿಗೆ ಸಿದ್ದರಾಮಯ್ಯನವರು ಕಾಂತರಾಜು ವರದಿಯೊಂದಿಗೆ ಬೀದಿ ಬೀದಿ ಅಲೆಯುತ್ತಿದ್ದರಲ್ಲವೇ? ರಾಹುಲ್ ಗಾಂಧಿಯವರ ಆದೇಶದಂತೆ ಸಿದ್ದರಾಮಯ್ಯನವರು ಆ ಕಾಂತರಾಜು ವರದಿಯನ್ನೂ ಕಸದ ಬುಟ್ಟಿಗೆ ಹಾಕಿದರಲ್ಲವೇ? ಹಾಗಾಗಿ ಅಹಿಂದ ಸಮುದಾಯಗಳು ಇವರಿಗೆ ಕೇವಲ ಮತಬ್ಯಾಂಕ್. ಆ ಸಮುದಾಯದ ಅಭಿವೃದ್ಧಿಗೆ ಬದ್ಧತೆ- ಕಳಕಳಿ ಇಲ್ಲ ಎಂದು ಟೀಕಿಸಿದರು.