ಹೈದರಾಬಾದ್: ತೆಲುಗು ಚಿತ್ರರಂಗದ ಹಿರಿಯ ನಟ ಕೋಟ ಶ್ರೀನಿವಾಸ ರಾವ್(83) ಅವರು ಭಾನುವಾರ ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೈದರಾಬಾದ್ನ ಫಿಲ್ಮ್ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.

ತಮ್ಮ ವಿಶಿಷ್ಟ ಅಭಿನಯದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಶ್ರೀನಿವಾಸ್ ರಾವ್ ಅವರ ಅಗಲಿಕೆ ತೆಲುಗು ಚಿತ್ರರಂಗದಲ್ಲಿ ದುಃಖದ ಛಾಯೆ ಮೂಡಿಸಿದೆ. ಕೋಟ ಶ್ರೀನಿವಾಸ ರಾವ್ ಅವರು ಪತ್ನಿ ರುಕ್ಮಿಣಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ಮಗ ಕೋಟ ವೆಂಕಟ ಆಂಜನೇಯ ಪ್ರಸಾದ್ 2010ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು.
ಖಳನಾಯಕ, ಹಾಸ್ಯನಟ, ಪೋಷಕ ಪಾತ್ರಗಳಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ಅವರ ಸಿನಿ ಪಯಣದಲ್ಲಿ ‘ಆಹ ನಾ ಪೆಲ್ಲಂಟ’, ‘ಗಣೇಶ್’, ಹಾಗೂ ‘ಪ್ರತಿಘಟನ’ ಸೇರಿದಂತೆ ಅನೇಕ ಸಿನಿಮಾಗಳು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತವೆ. ಚಿತ್ರರಂಗಕ್ಕೆ ಪ್ರವೇಶಿಸುವುದಕ್ಕೂ ಮುನ್ನ ಶ್ರೀನಿವಾಸ್ ರಾವ್ ಅವರು ಸ್ಟೇಟ್ ಬ್ಯಾಂಕ್ನಲ್ಲಿ ಉದ್ಯೋಗದಲ್ಲಿದ್ದರು.