ನಾಳೆ ಶಿವಕುಮಾರ ಸ್ವಾಮೀಜಿ 7ನೇ ಪುಣ್ಯ ಸಂಸ್ಮರಣೆ.

ನಾಳೆ ಶಿವಕುಮಾರ ಸ್ವಾಮೀಜಿ 7ನೇ ಪುಣ್ಯ ಸಂಸ್ಮರಣೆ.

ಸಿದ್ಧಗಂಗಾ ಮಠಕ್ಕೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಆಗಮನ.

ತುಮಕೂರು : ತ್ರಿವಿಧ ದಾಸೋಹಿ, ನಡೆದಾಡುವ ದೇವರು ಸಿದ್ಧಗಂಗಾ ಮಠದ ಶಿವೈಕ್ಯ ಡಾ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾಗಿ ನಾಳೆಗೆ (ಜನವರಿ 21) ಏಳು ವರ್ಷ. ಈ ಹಿನ್ನೆಲೆ ನಾಳೆ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಡಾ. ಶಿವಕುಮಾರ ಸ್ವಾಮೀಜಿಗಳ 7ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ನಡೆಯಲಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್​​​​​  ಅವರು ಭಾಗಿಯಾಗುತ್ತಿದ್ದಾರೆ. ಆ ಮೂಲಕ ಕರ್ನಾಟಕಕ್ಕೆ ಮೂರನೇ ಬಾರಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಸಿದ್ಧಗಂಗಾ ಮಠದಲ್ಲಿ ಪೊಲೀಸ್ ಬಿಗಿಭದ್ರತೆ ನಿಯೋಜನೆ ಮಾಡಲಾಗಿದೆ.

ಉಪರಾಷ್ಟ್ರಪತಿ ಅವರ ವೇಳಾಪಟ್ಟಿ ಹೀಗಿದೆ

ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್​​​​​ ಅವರು ತುಮಕೂರು ವಿವಿ ಹೆಲಿಪ್ಯಾಡ್​ನಿಂದ ನೇರವಾಗಿ ಸಿದ್ಧಗಂಗಾ ಮಠಕ್ಕೆ ಆಗಮಿಸುತ್ತಾರೆ. ಶ್ರೀಗಳ ಗದ್ದುಗೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ಹೆಲಿಪ್ಯಾಡ್​ನಿಂದ ನೇರವಾಗಿ ಬೆಂಗಳೂರಿಗೆ ತೆರಳಿದ್ದಾರೆ.

ಪೊಲೀಸ್ ಭದ್ರತೆ ಬಗ್ಗೆ ಎಸ್​​ಪಿ ಅಶೋಕ್ ಕೆವಿ ಹೇಳಿದ್ದಿಷ್ಟು 

ಪೊಲೀಸ್ ಭದ್ರತೆ ಬಗ್ಗೆ ತುಮಕೂರು ಎಸ್​​ಪಿ ಅಶೋಕ್ ಕೆವಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, 7ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿಗಳು ಆಗಮಿಸುತ್ತಿದ್ದಾರೆ. ಸಿದ್ಧಗಂಗಾ ಮಠದ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಮಾರು 10 ರಿಂದ 12 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಕಾರ್ಯಕ್ರಮ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

1 ಸಾವಿರ ಪೊಲೀಸರ ನಿಯೋಜನೆ

ಇನ್ನು ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನ‌ ಮಾಡಿಕೊಳ್ಳಲಾಗಿದೆ. ಮಠದಲ್ಲಿ ಒಂದೇ ಕಾರ್ಯಕ್ರಮ ಇರುವುದು. 1 ಸಾವಿರ ಪೊಲೀಸರನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ. 3 ಕೆಎಸ್​​ಆರ್​ಪಿ ತುಕಡಿ, ಡಿಆರ್ ಸಿಬ್ಬಂದಿ, ಗುಪ್ತಚರ ಇಲಾಖೆಯ ಸಿಬ್ಬಂದಿ ಸೇರಿದಂತೆ 1 ಸಾವಿರ ಪೊಲೀಸರನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದು ಹೇಳಿದ್ದಾರೆ.

ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್​​ ಅವರೊಂದಿಗೆ ರಾಜ್ಯಪಾಲರು, ಕೇಂದ್ರ ಸಚಿವ ವಿ. ಸೋಮಣ್ಣ, ಡಾ. ಜಿ. ಪರಮೇಶ್ವರ್, ಸಂಸದರು, ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ತುಮಕೂರು ಎಸ್​​ಪಿ ಅಶೋಕ್ ಕೆವಿ ಹೇಳಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *