ಅಶ್ಲೀಲತೆ ಆರೋಪಕ್ಕೆ ಸಿಬಿಎಫ್ಸಿ ಮುಖ್ಯಸ್ಥ ಪ್ರಸೂನ್ ಜೋಶಿ ಪ್ರತಿಕ್ರಿಯೆ.
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆ ಆಗಿ ಕೆಲ ವಾರಗಳಾಗಿವೆ. ಟೀಸರ್, ಈಗಾಗಲೇ ದಾಖಲೆ ಸಂಖ್ಯೆಯ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಸಹ ಕೋಟ್ಯಂತರ ಮಂದಿ ‘ಟಾಕ್ಸಿಕ್’ ಸಿನಿಮಾದ ಟೀಸರ್ ನೋಡಿದ್ದಾರೆ. ಟೀಸರ್ನ ಗುಣಮಟ್ಟವನ್ನು ಬಹುವಾಗಿ ಕೊಂಡಾಡಿದ್ದಾರಾದರೂ ಕೆಲವರು, ಟೀಸರ್ನಲ್ಲಿ ಅನವಶ್ಯಕ ಅಶ್ಲೀಲತೆ ಇದೆ ಎಂದು ಮೂಗು ಮುರಿದಿದ್ದಾರೆ. ಕೆಲವರು ಈಗಾಗಲೇ ಮಕ್ಕಳ ಆಯೋಗ, ಮಹಿಳಾ ಆಯೋಗಕ್ಕೆ ಈ ಬಗ್ಗೆ ದೂರು ಸಹ ನೀಡಿದ್ದಾರೆ. ಸಿಬಿಎಫ್ಸಿಗೆ ಸಹ ಈ ಬಗ್ಗೆ ದೂರು ನೀಡಲಾಗಿದ್ದು, ‘ಟಾಕ್ಸಿಕ್’ ಸಿನಿಮಾಕ್ಕೆ ಪ್ರಮಾಣ ಪತ್ರವನ್ನೇ ನೀಡಬಾರದು ಎಂದು ಆಗ್ರಹಿಸಿದ್ದಾರೆ. ಇದೀಗ ಸ್ವತಃ ಸಿಬಿಎಫ್ಸಿಯ ಮುಖ್ಯಸ್ಥ ಪ್ರಸೂನ್ ಜೋಶಿ ‘ಟಾಕ್ಸಿಕ್’ ಸಿನಿಮಾ ಟೀಸರ್ ಬಗ್ಗೆ ಮಾತನಾಡಿದ್ದಾರೆ.
‘ಸೆನ್ಸಾರ್ ಮಂಡಳಿಗೆ ಸಿನಿಮಾವನ್ನು ನೀಡದ ಹೊರತು ನಾನು ಆ ಬಗ್ಗೆ ಪ್ರತಿಕ್ರಿಯಿಸಲು ಹೋಗುವುದಿಲ್ಲ, ಆದರೆ ಕೆಲವೊಮ್ಮೆ, ಯೂಟ್ಯೂಬ್ ಮತ್ತು ಇತರೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ನೀವು ನೋಡುವ ಬಹಳಷ್ಟು ವಿಷಯಗಳು ಸೆನ್ಸಾರ್ ಆಗಿರುವುದಿಲ್ಲ, ಆದರೆ ಜನರು ಅದು ಸೆನ್ಸಾರ್ ಮಂಡಳಿಯಿಂದ ಸೆನ್ಸಾರ್ ಆಗಿ ಬಂದಿದೆ ಎಂದು ಭಾವಿಸುತ್ತಾರೆ. ಆದರೆ ಅದು ಸೆನ್ಸಾರ್ ಆಗಿರುವುದಿಲ್ಲ ಎಂದು ಸ್ಪಷ್ಟನೆ ನೀಡುತ್ತೇನೆ’ ಎಂದಿದ್ದಾರೆ. ಆ ಮೂಲಕ ‘ಟಾಕ್ಸಿಕ್’ ಟೀಸರ್ನಲ್ಲಿ ಸೆನ್ಸಾರ್ ಆಗಬಹುದಾದ ಅಂಶಗಳು ಇವೆಯೆಂದು ಪರೋಕ್ಷವಾಗಿ ಹೇಳಿದ್ದಾರೆ.
ಸಿನಿಮಾಕ್ಕೆ ಸಿಬಿಎಫ್ಸಿ ಪ್ರಮಾಣ ಪತ್ರ ನೀಡಬಾರದು ಎಂಬ ಆಗ್ರಹ ಇದೆ ಎಂಬ ಪ್ರಶ್ನೆಗೆ ಉತ್ತರಿಸಿ, ‘ನಾನು ಈಗಲೇ ಏನನ್ನೂ ಖಡಾ ಖಂಡಿತವಾಗಿ ಹೇಳಲು ಬರುವುದಿಲ್ಲ. ಡಿಜಿಟಲ್ ಮಾಧ್ಯಮಗಳಲ್ಲಿ ಜನ ನೋಡುವ ಬಹಳಷ್ಟು ವಿಷಯಗಳು ಸೆನ್ಸಾರ್ ಪ್ರಕ್ರಿಯೆಯ ಮೂಲಕ ಹಾದು ಹೋಗಿರುವುದಿಲ್ಲ. ಆದರೆ ಜನ ಸೆನ್ಸಾರ್ ಮಂಡಳಿಯಿಂದ ಒಪ್ಪಿಗೆ ಪಡೆದಿವೆ ಎಂದುಕೊಂಡು ಒಟಿಟಿ, ಯೂಟ್ಯೂಬ್ಗಳಲ್ಲಿ ಸಿನಿಮಾಗಳನ್ನು ನೋಡುತ್ತಾರೆ, ಇದು ಸರಿಯಲ್ಲ, ಅನ್ಯಾಯ’ ಎಂದಿದ್ದಾರೆ ಆ ಮೂಲಕ ಒಟಿಟಿ ಮತ್ತು ಯೂಟ್ಯೂಬ್ ಕಂಟೆಂಟ್ಗಳೂ ಸಹ ಸೆನ್ಸಾರ್ ಪ್ರಕ್ರಿಯೆಗೆ ಒಳಗಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಸೂಸ್ ಜೋಶಿ ಅವರಿಗೆ ‘ಜನ ನಾಯಗನ್’ ಸಿನಿಮಾದ ಬಗ್ಗೆ ಕೇಳಲಾದ ಪ್ರಶ್ನೆಯ ಬಗ್ಗೆ ಉತ್ತರಿಸಲು ನಿರಾಕರಿಸಿದ ಪ್ರಸೂನ್ ಜೋಶಿ, ‘ಆ ಪ್ರಕರಣ ಪ್ರಸ್ತುತ ನ್ಯಾಯಾಲಯದಲ್ಲಿ ಹಾಗಾಗಿ ಆ ಬಗ್ಗೆ ಏನೂ ಹೇಳುವುದಿಲ್ಲ’ ಎಂದರು.
‘ಟಾಕ್ಸಿಕ್’ ಸಿನಿಮಾದ ಟೀಸರ್ ಕುರಿತಾಗಿ ಕರ್ನಾಟಕ ಎಎಪಿ ಮಹಿಳಾ ಘಟಕದ ಸದಸ್ಯೆಯರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಅಲ್ಲದೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬುವರು ಸಿಬಿಎಫ್ಸಿಗೆ ಕರೆ ಮಾಡಿದ್ದು, ‘ಟಾಕ್ಸಿಕ್’ ಸಿನಿಮಾನಲ್ಲಿ ಸಾಕಷ್ಟು ಅಶ್ಲೀಲ ದೃಶ್ಯಗಳಿದ್ದು, ಇದು ಮಕ್ಕಳು, ಯುವಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಹಾಗಾಗಿ ಸಿನಿಮಾಕ್ಕೆ ಸಿಬಿಎಫ್ಸಿ ಪ್ರಮಾಣ ಪತ್ರ ನೀಡಬಾರದು ಎಂದು ಆಗ್ರಹಿಸಿದ್ದಾರೆ.
‘ಟಾಕ್ಸಿಕ್’ ಸಿನಿಮಾ ಅನ್ನು ಗೀತು ಮೋಹನ್ದಾಸ್ ನಿರ್ದೇಶನ ಮಾಡಿದ್ದು, ಸಿನಿಮಾಕ್ಕೆ ಯಶ್ ಹಾಗೂ ಕೆವಿಎನ್ ಒಟ್ಟಾಗಿ ಬಂಡವಾಳ ತೊಡಗಿಸಿದ್ದಾರೆ. ಸಿನಿಮಾನಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾ ಮಾರ್ಚ್ 19ಕ್ಕೆ ಬಿಡುಗಡೆ ಆಗಲಿದೆ.
For More Updates Join our WhatsApp Group :




