ನವದೆಹಲಿ: ಇಂದು ರಾಷ್ಟ್ರ ರಾಜಧಾನಿ ದೆಹಲಿಯ ಕರವಾಲ್ ನಗರದಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಒಬ್ಬ ವ್ಯಕ್ತಿ ತನ್ನ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಕೊಂದು ಸ್ಥಳದಿಂದ ಪರಾರಿಯಾಗಿದ್ದಾರೆ. ಆರೋಪಿಯನ್ನು ಪ್ರದೀಪ್ ಎಂದು ಗುರುತಿಸಲಾಗಿದೆ ಈತ ತನ್ನ ಪತ್ನಿ ಜಯಶ್ರೀ ಮತ್ತು ಐದು ಮತ್ತು ಏಳು ವರ್ಷದ ಪುತ್ರಿಯರನ್ನು ಕೊಂದಿದ್ದಾರೆ. ಸದ್ಯದ ಮಾಹಿತಿಯ ಪ್ರಕಾರ, ದಂಪತಿಯ ನಡುವೆ ಜಗಳವಾಗಿದ್ದು, ನಂತರ ಪ್ರದೀಪ್ ಈ ಕೊಲೆ ಮಾಡಿದ್ದಾರೆ.
ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರದೀಪ್ ಬಂಧನಕ್ಕೆ ಹುಡುಕಾಟ ಆರಂಭಿಸಿದ್ದಾರೆ. ಇದರ ಜೊತೆಗೆ, 3 ಜನರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. “ದೆಹಲಿಯ ಕರವಾಲ್ ನಗರ ಪ್ರದೇಶದಲ್ಲಿ ಪ್ರದೀಪ್ ಎಂಬ ವ್ಯಕ್ತಿ ತನ್ನ ಪತ್ನಿ, 5 ಮತ್ತು 7 ವರ್ಷದ ಇಬ್ಬರು ಹೆಣ್ಣುಮಕ್ಕಳನ್ನು ಕೊಂದಿದ್ದಾರೆ. ಬಳಿಕ ಅವರು ತಲೆಮರೆಸಿಕೊಂಡಿದ್ದಾರೆ” ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯು ದಕ್ಷಿಣ ದೆಹಲಿಯ ನೆಬ್ ಸರಾಯ್ ಪ್ರದೇಶದಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಅಪ್ಪ, ಅಮ್ಮ ಮತ್ತು ತಂಗಿಯನ್ನು ಕೊಂದಿದ್ದ ತ್ರಿವಳಿ ಕೊಲೆಯ ಕರಾಳ ನೆನಪುಗಳನ್ನು ಮತ್ತೆ ನೆನಪಿಸಿದೆ. ಆ ಕೊಲೆಯ ಆರೋಪಿ 20 ವರ್ಷದ ಅರ್ಜುನ್ ಆಸ್ತಿಯೆಲ್ಲ ತನಗೇ ಸಿಗಬೇಕೆಂದು ತನ್ನ ಪೋಷಕರು ತನ್ನ ತಂಗಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ.
ರಾಜೇಶ್ ಕುಮಾರ್ (51), ಅವರ ಪತ್ನಿ ಕೋಮಲ್ (46) ಮತ್ತು ಅವರ ಮಗಳು ಕವಿತಾ (23) ಎಂಬ ಮೂವರ ಶವಗಳು ಡಿಸೆಂಬರ್‌ನಲ್ಲಿ ಡಿಯೋಲಿ ಗ್ರಾಮದಲ್ಲಿರುವ ಅವರ ನಿವಾಸದಲ್ಲಿ ಪತ್ತೆಯಾಗಿತ್ತು. ಮೊದಲು ದರೋಡೆಕೋರರು ಮನೆಯವರನ್ನು ಕೊಲೆ ಮಾಡಿ, ಎಲ್ಲವನ್ನೂ ದೋಚಿಕೊಂಡು ಹೋಗಿದ್ದಾರೆ ಎಂದು ಕೇಸ್ ದಾಖಲಾಗಿತ್ತು. ಆದರೆ, ಪೊಲೀಸರ ತನಿಖೆ ವೇಳೆ ಅರ್ಜುನ್ ಮಾಡಿದ್ದ ಕೊಲೆಯ ಸಂಚು ಬೆಳಕಿಗೆ ಬಂದಿತ್ತು.
For More Updates Join our WhatsApp Group :