ತುಮಕೂರು || 6 ಕೋಟಿ ವೆಚ್ಚದ ಮಲ್ಟಿ ಸ್ಪೆಷಾಲಿಟಿ ಪಶು ಆಸ್ಪತ್ರೆಗೆ ಬೀಗ

ವರದಿ : ಎಸ್.ಹರೀಶ್ ಆಚಾರ್ಯ

– ಕಟ್ಟಡವೂ ಇದೆ, ಯಂತ್ರೋಪಕರಣವೂ ಬಂದಿದೆ, ತಜ್ಞವೈದ್ಯರು, ಸಿಬ್ಬಂದಿಯಿಲ್ಲದೆ ಸೇವೆ ಬಂದ್

– ಬೆಂಗಳೂರು ವಿಭಾಗ ಮಟ್ಟದ 9 ಜಿಲ್ಲೆಗಳ ಪಶುಗಳ ವಿಶೇಷ ಸರ್ಜರಿಗೆಂದೇ ಮಂಜೂರಾದ ಆಸ್ಪತ್ರೆ

ತುಮಕೂರು : ರಾಜಧಾನಿ ಬೆಂಗಳೂರು ಸುತ್ತಮುತ್ತಲ 9 ಜಿಲ್ಲೆಗಳಲ್ಲಿ ಜಾನುವಾರುಗಳ ಎಲ್ಲಾ ತರಹದ ಶಸ್ತ್ರಚಿಕಿತ್ಸೆಗೆ ಅನುಕೂಲವಾಗಲೆಂದು ತುಮಕೂರಿನ ಶಿರಾಗೇಟ್À ಅರಳೀಮರದ ಪಾಳ್ಯದಲ್ಲಿ  ಸ್ಥಾಪಿಸಲಾದ ಬೆಂಗಳೂರು ವಿಭಾಗ ಮಟ್ಟದ  ಮಲ್ಟಿ ಸ್ಪೆಷಾಲಿಟಿ ಪಶು ಆಸ್ಪತ್ರೆ ನಿರ್ಮಾಣ ಮಾಡಿ ಮೂರು ವರ್ಷಗಳೇ ಕಳೆದಿದ್ದರೂ ಇನ್ನೂ ಉದ್ಘಾಟನೆ ಭಾಗ್ಯ ಕಾಣದೆ ಪ್ರವೇಶದ್ವಾರಕ್ಕೆ ಬೀಗ ಜಡಿಯಲಾಗಿದ್ದು, ಸುಮಾರು 6 ಕೋಟಿ ಸರಕಾರಿ ಅನುದಾನ ವೆಚ್ಚ ಮಾಡಿ ನಿರ್ಮಿಸಿದ ಆಸ್ಪತ್ರೆ ಕಟ್ಟಡ, ಆವರಣ ಸದ್ಯ ಗಿಡಗಂಟೆ ಬೆಳೆದು, ಧೂಳು ಹಿಡಿಯುವಂತಾಗಿದೆ.

ಆಸ್ಪತ್ರೆಗೆಂದೇ ಮೀಸಲಿರಿಸಿದ ಐಡಿಎಸ್‍ಎಂಟಿ ಜಾಗ : ಹಿಂದೆ ಶಿರಾಗೇಟ್ ಭಾಗದಲ್ಲಿ ಸಣ್ಣ ಮತ್ತು ಮಧ್ಯಮ ನಗರಗಳ ಅಭಿವೃದ್ಧಿ ಅನುದಾನದಡಿ ರೂಪಿಸಲಾದ ಲೇಔಟ್‍ನಲ್ಲಿ ಸಿಎ ನಿವೇಶನಗಳಲ್ಲಿ ಪಾರ್ಕ್, ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆಯನ್ನು ತೆರೆಯಬೇಕೆಂದು ಮೀಸಲಿರಿಸಲಾಗಿತ್ತು. ಏತನ್ಮಧ್ಯೆ ಸಿದ್ದರಾಮಯ್ಯ ಅವರ ಸರಕಾರದ ಅವಧಿಯಲ್ಲಿ ಪಶುಸಂಗೋಪನಾ ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಅವರು ಬೆಂಗಳೂರು ವಿಭಾಗ ಮಟ್ಟದ ಎಲ್ಲಾ ತರಹದ ಸರ್ಜರಿಗೆಂದೇ ಅಗತ್ಯವಾದ ಮಲ್ಟಿ ಸ್ಪೆಷಾಲಟಿ ಆಸ್ಪತ್ರೆಯನ್ನು ಬೆಂಗಳೂರು ಬಿಟ್ಟು  ತುಮಕೂರಿಗೆ ಮಂಜೂರು ಮಾಡಿಸಿದ್ದರು. ಇದರಿಂದ 6 ಕೋಟಿ ವೆಚ್ಚದಲ್ಲಿ  ಅರಳೀಮರದ ಪಾಳ್ಯದ  ಐಡಿಎಸ್‍ಎಂಟಿ ಸಿಎ ಸ್ಥಳದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪಕ್ಕವೇ ಪಶುಆಸ್ಪತ್ರೆಯ ಸುಸಜ್ಜಿತ ಕಟ್ಟಡವೇನೋ ನಿರ್ಮಾಣವಾಯಿತು. ನಂತರ ಬದಲಾದ ಸರಕಾರದ ವ್ಯವಸ್ಥೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭಿಸಲು ಸೂಕ್ತ ಸಿಬ್ಬಂದಿಯನ್ನೇ ಈ ವರೆಗೆ ಮಂಜೂರು ಮಾಡದಿರುವುದು ಅಂಗೈಯಲ್ಲೇ ಬೆಣ್ಣೆ ಇಟ್ಟುಕೊಂಡು ತಿನ್ನಲಾಗದ ಪರಿಸ್ಥಿತಿ ಸೃಷ್ಟಿಸಿದೆ.

ಪಕ್ಕದ ಆರೋಗ್ಯ ಕೇಂದ್ರದಲ್ಲಿ ಜನ, ಇಲ್ಲಿ ಕಸ : ಸದರಿ ಆಸ್ಪತ್ರೆಗೆ ಜಂಟಿಯಾಗೇ ಇರುವ ಆರೋಗ್ಯ ಇಲಾಖೆಯ ಪ್ರಾಥಮಿಕ ಆರೋಗ್ಯ ಕೇಂದ್ರ ನಿರಂತರ ಜನಬಳಕೆಗೆ ಉಪಯೋಗವಾಗುತ್ತಿದ್ದು, ಈ ಪಶು ಆಸ್ಪತ್ರೆ ಕಟ್ಟಡ ಮಾತ್ರ ನಿರರ್ಥಕವಾಗಿ, ಕಸಕಡ್ಡಿಗಳಿಂದ ಆವೃತ್ತವಾಗುತ್ತಿದೆ. ಆಸ್ಪತ್ರೆ ಪ್ರಾಂಗಣದಲ್ಲಿ ಕಾಂಗ್ರೆಸ್ ಗಿಡ, ಎಕ್ಕದ ಗಿಡಗಳು, ಹುಲ್ಲು ಹುಲುಸಾಗಿ ಬೆಳೆಯುತ್ತಿದ್ದು, ದೊಡ್ಡ ಹತ್ತಿಮರದ ಕಾಯಿಗಳು ಉದುರಿ ರಾಶಿ ಕಸ ಸಂಗ್ರಹವಾಗುತ್ತಿದೆ. ಈ ಸಮಸ್ಯೆ ಬಗ್ಗೆ ಸ್ಥಳೀಯ ಕಾರ್ಪೋರೇಟರ್‍ಗಳು, ಶಾಸಕರು, ಸಂಸದರು ಸರಕಾರದ ಮೇಲೆ ಒತ್ತಡ ಹೇರಿದರೂ ಆಸ್ಪತ್ರೆ ಸೇವೆ ಪಡೆಯುವ ಭಾಗ್ಯ ಬೆಂಗಳೂರು ವಿಭಾಗ ಮಟ್ಟದ ಪಶುಪಾಲಕರಿಗೆ ಅಲಭ್ಯವಾಗಿದೆ.

ಬೇಕಿದೆ ನಾಲ್ವರು ತಜ್ಞ ವೈದ್ಯರು, ತಾಂತ್ರಿಕ, ಸೇವಾ ಸಿಬ್ಬಂದಿ : ಸದರಿ ಪಶು ಆಸ್ಪತ್ರೆಗೆ ಗೈನಾಕಲಜಿ, ಮೆಡಿಸನ್, ಸರ್ಜರಿ ತಜ್ಞರು, ಉಪನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಯೋಗಾಲಯ ಸಿಬ್ಬಂದಿ ಮತ್ತು ಡಿ ಗ್ರೂಪ್ ಸೇವಾ ಸಿಬ್ಬಂದಿಯನ್ನು ಮಂಜೂರು ಮಾಡಬೇಕೆಂದು ಹಣಕಾಸು ಇಲಾಖೆ ಮುಂದೆ ಪಶುಪಾಲನಾ ಇಲಾಖೆಯಿಂದ ಸಲ್ಲಿಕೆಯಾಗಿರುವ ಪ್ರಸ್ತಾವನೆ ಇನ್ನೂ ಅಂಗೀಕಾರಗೊಳ್ಳದೆ ಹಾಗೇ ಉಳಿದಿದ್ದು, ತಾತ್ಕಾಲಿಕವಾಗಿ ಸಿಬ್ಬಂದಿಯನ್ನು ಹಾಕಿ ಸೇವೆ ಚಾಲೂ ಮಾಡಲು ಜಿಲ್ಲೆಯ ಪಶುಪಾಲನಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭ ಮತ್ತಷ್ಟು ನನೆಗುದಿಗೆ ಬೀಳುವಂತಾಗಿದೆ. ಇನ್ನೂ ಆಸ್ಪತ್ರೆಗೆ ಅಗತ್ಯವಾದ ಎಕ್ಸರೆ ಉಪಕರಣ, ಆಕ್ಸಿಜನ್ ಸಿಲಿಂಡರ್, ಓಟಿ ಉಪಕರಣಗಳೆಲ್ಲ ಬಂದಿದ್ದು, ಬಳಕೆ ಮಾಡಬೇಕಾದ ಸಿಬ್ಬಂದಿಯನ್ನು ಮೊದಲು ಒದಗಿಸಿÀಸೇವೆ ಆರಂಭಿಸಬೇಕೆಂದು ಪಾಲಿಕೆ ಹಾಲಿ ಸದಸ್ಯ ಲಕ್ಷ್ಮೀ ನರಸಿಂಹರಾಜು ಹಾಗೂ ಮಾಜಿ ಸದಸ್ಯ ಎನ್.ಮಹೇಶ್ ಇತರ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಗೋಹತ್ಯೆ ನಿಷೇಧ ಕಾಯ್ದೆ ತಂದಿರುವ ಸರಕಾರ, ಪಶುಗಳ ಶುಶ್ರೂಷೆ ಬಗ್ಗೆ ಗಮನಹರಿಸುತ್ತಿಲ್ಲವೇಕೆ?

ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿರುವ ಸರಕಾರ ಪಶುಗಳ ನಿರ್ವಹಣೆಗಾಗಿ ಜಿಲ್ಲಾ, ತಾಲೂಕು ಕೇಂದ್ರದಲ್ಲಿ ಗೋಶಾಲೆ ತೆರೆಯಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಸಣ್ಣ ಗಂಡು ಕರುಗಳು, ಮುದಿ ದನ, ಎತ್ತು, ಹಸುಗಳೇ ಈ ಗೋ ಶಾಲೆಗಳಲ್ಲಿ ಆಶ್ರಯ ಪಡೆಯುವುದು ಅನಿವಾರ್ಯವಾಗಲಿದೆ. ಇಂತಹ ಸಂದರ್ಭದಲ್ಲಿ ಅವುಗಳಿಗೆ ರೋಗ-ರುಜಿನ ಬಂದರೆ ಚಿಕಿತ್ಸೆ ಕೊಡಲು ಸೂಕ್ತವಾದ ವೈದ್ಯಕೀಯ ಶುಶ್ರೂಷೆ ವ್ಯವಸ್ಥೆಯನ್ನು ಮಾಡಬೇಕಾದ್ದು ಸರಕಾರದ ಜವಾಬ್ದಾರಿಯಿಲ್ಲವೇ. ಹಾಲಿ ತೆರೆದಿರುವ ಪಶುಆಸ್ಪತ್ರೆಯನ್ನು ಸೂಕ್ತ ಸಿಬ್ಬಂದಿಯನ್ನು ಕೊಡಲಾಗದಿದ್ದರೆ ಮುಂದೆ ಗೋಶಾಲೆ ಪಶುಗಳ ಪರಿಸ್ಥಿತಿ ಏನಾಗಬಹುದು ಎಂಬ ಪ್ರಶ್ನೆಯನ್ನು ಪ್ರಜ್ಞಾವಂತರು ಕೇಳುವಂತೆ ಮಾಡಿದೆ.

ರಾಜಧಾನಿಗೆ ಮಂಜೂರಾಗಿದ್ದ ಬೆಂಗಳೂರು ವಿಭಾಗ ಮಟ್ಟದ ಆಸ್ಪತ್ರೆಯನ್ನು ಕಾಂಗ್ರೆಸ್ ಸರಕರದಲ್ಲಿ ಪಶುಪಾಲನಾ ಸಚಿವನಾಗಿದ್ದ ವೇಳೆ ತುಮಕೂರಿಗೆ ವರ್ಗಾವಣೆ ಮಾಡಿಸಿದೆ. ಶಿರಾದಲ್ಲೂ ಆತ್ಯಾಧುನಿಕ ಪ್ರಯೋಗಾಲಯ ಪಶುಆಸ್ಪತ್ರೆ ನಿರ್ಮಿಸಲಾಯಿತು. 2 ಕಡೆ ಸುಸಜ್ಜಿತ ಕಟ್ಟಡವೇನೋ ತಲೆ ಎತ್ತಿದವು. ಆದರೆ ಬದಲಾದ ಸರಕಾರದಲ್ಲಿ ಆಡಳಿತಾರೂಢ ಸರಕಾರ, ಜನಪ್ರತಿನಿಧಿಗಳಾದವರ ಇಚ್ಚಾಶಕ್ತಿ ಕೊರತೆಯಿಂದ ಅಗತ್ಯ ಸಿಬ್ಬಂದಿಗಳು ಬಾರದೆ ಪಶುಪಾಲಕರಿಗೆ ಆಸ್ಪತ್ರೆ ಸೇವೆ ದೊರೆಯದಂತಾಗಿದೆ. ಹಿಂದಿನ ಬಜೆಟ್‍ಗಳಲ್ಲಿ ಮಂಜೂರಾದ ಯೋಜನೆಗಳ ಕಾರ್ಯಗತಕ್ಕೆ ಆಡಳಿತ, ಜನಪ್ರತಿನಿಧಿಗಳು ಒತ್ತುಕೊಟ್ಟು, ಅಗತ್ಯ ಸಿಬ್ಬಂದಿ ಒದಗಿಸದಿದ್ದರೆ ಸಾರ್ವಜನಿಕ ಸೇವಾ ಸಂಸ್ಥೆಗಳು ಈ ರೀತಿ ನಿಷ್ಪ್ರಯೋಜಕವಾಗುತ್ತವೆ.

-ಟಿ.ಬಿ.ಜಯಚಂದ್ರ, ಮಾಜಿ ಸಚಿವರು.

ನಗರದ 3ನೇ ವಾರ್ಡಿನಲ್ಲಿ ನಿರ್ಮಿಸಿರುವ ಮಲ್ಟಿಸ್ಪೆಷಾಲಿಟಿ ಪಶು ಆಸ್ಪತ್ರೆ ಬೇಗ ತೆರೆಯಬೇಕೆಂದು ಪಶುಸಂಗೋಪನಾ ಸಚಿವರಾದಿಯಾಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ವರ್ಷಾನುಗಟ್ಟಲೇ ಕಟ್ಟಡ ಹಾಗೇ ಬಿಟ್ಟರೆ ಶಿಥಿಲವಾಗುವುದಿಲ್ಲವೇ?. ಬರೀ ಲೈಟ್ ಬಿಲ್ ಕಟ್ಟಿಕೊಂಡು ಬೀಗ ಹಾಕಿಕೊಂಡು ಹೋಗಲು ಕೋಟಿಗಟ್ಟಲೇ ವೆಚ್ಚ ಮಾಡಿ ಆಸ್ಪತ್ರೆ ಕಟ್ಟಬೇಕಿತ್ತೇ. ಸ್ಥಳೀಯ ಶಾಸಕರು, ಸಂಸದರು, ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕು.

ಲಕ್ಷ್ಮೀನರಸಿಂಹರಾಜು, 3ನೇ ವಾರ್ಡ್ ಪಾಲಿಕೆ ಸದಸ್ಯರು.

ಮಲ್ಟಿ ಸ್ಪೆಷಾಲಿಟಿ ಪಶು ಆಸ್ಪತ್ರೆಯಲ್ಲಿ ಸೇವೆ ಆರಂಭ ಸಂಬಂಧ ಸರಕಾರದ ಮುಂದೆ ನಾಲ್ವರು ತಜ್ಞ ವೈದ್ಯರು,  ಸಿಬ್ಬಂದಿ ಮಂಜೂರಾತಿ ಪ್ರಸ್ತಾವನೆಯನ್ನು ಇಲಾಖೆ ಇರಿಸಿದೆ. ತಾತ್ಕಾಲಿಕವಾಗಿ ಸಿಬ್ಬಂದಿಯನ್ನು ಹಾಕಿ ಸೇವೆ ಆರಂಭಿಸುವ ಬಗ್ಗೆಯೂ ಇಲಾಖೆ ಉನ್ನತಾಧಿಕಾರಿಗಳು ಸಮಾಲೋಚನೆ ನಡೆಸುತ್ತಿದ್ದಾರೆ. ಆದರೆ ಇಲಾಖೆಯಲ್ಲೇ ಸಿಬ್ಬಂದಿ ಕೊರತೆಯಿರುವುದು ಆಸ್ಪತ್ರೆ ಕಾರ್ಯಚರಣೆಗೆ ವಿಳಂಬವಾಗಿದೆ.

-ದಿವಾಕರ್, ಸಹಾಯಕ ನಿರ್ದೇಶಕರು, ಪಶುಪಾಲನಾ ಇಲಾಖೆ.

Leave a Reply

Your email address will not be published. Required fields are marked *