ತುಮಕೂರು: ಜಿಲ್ಲೆಯಲ್ಲಿ ಈವರೆಗೂ 182 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಎಲ್ಲ ಜನವಸತಿ ಪ್ರದೇಶಗಳಲ್ಲಿ ವಾರಕ್ಕೆ ಎರಡು ಬಾರಿ ಫಾಗಿಂಗ್, ಚರಂಡಿಗಳ ಸ್ವಚ್ಛತೆ ಸೇರಿದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಡೆಂಗ್ಯೂ ಪ್ರಕರಣಗಳು ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಹೆಚ್ಚು ವರದಿಯಾಗುತ್ತವೆ. ಮಹಾನಗರ ಪಾಲಿಕೆ, ಆರೋಗ್ಯ, ಶಿಕ್ಷಣ ಸೇರಿದಂತೆ ಮತ್ತಿತರ ಇಲಾಖೆಗಳ ಸಹಭಾಗಿತ್ವದಲ್ಲಿ ಈಗಾಗಲೇ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಈವರೆಗೆ ಸುಮಾರು 5,700 ಡೆಂಗ್ಯು ಪ್ರಕರಣಗಳು ವರದಿಯಾಗಿವೆ. ಸಾವುಗಳು ಸಂಭವಿಸಿವೆ.
ಇದರಿಂದ ಜನರಲ್ಲಿ ಆತಂಕ ಸೃಷ್ಟಿಯಾಗುತ್ತಿದೆ. ಜಿಲ್ಲೆಯಲ್ಲಿ ಡೆಂಗ್ಯೂ-ಚಿಕುಗುನ್ಯಾದಿಂದ ಯಾವುದೇ ಸಾವು ಸಂಭವಿಸಿಲ್ಲ. ಆದರೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಎಂದು ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಈವರೆಗೆ ದಾಖಲಾದ 3,305 ಶಂಕಿತ ಡೆಂಗ್ಯೂ ಪ್ರಕರಣಗಳ ಪೈಕಿ 1,662 ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 182 ಜನರಲ್ಲಿ ಡೆಂಗ್ಯೂ ದೃಢಪಟ್ಟಿದೆ. ಜಿಲ್ಲೆಯ ಜನರ ಆರೋಗ್ಯದ ಹಿತದೃಷ್ಟಿಯಿಂದ ರೋಗ ನಿಯಂತ್ರಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಾಲಿಕೆ, ಆರೋಗ್ಯ ಇಲಾಖೆ ಜಂಟಿಯಾಗಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿವೆ.
ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, 148 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 3 ವೈದ್ಯಕೀಯ ಕಾಲೇಜು ಹಾಗೂ 1 ಸರ್ಕಾರಿ ಸೇರಿದಂತೆ 9 ಖಾಸಗಿ ಪ್ರಯೋಗಾಲಯಗಳಲ್ಲಿ ಡೆಂಗ್ಯೂ ಪರೀಕ್ಷೆ ಮಾಡಿಸಬಹುದು. ಜನರು ಡೆಂಗ್ಯೂ ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಉದಾಸೀನ ತೋರದೇ ರಕ್ತದ ಮಾದರಿಯನ್ನು ಪರೀಕ್ಷೆಗೊಳಪಡಿಸಬೇಕು. ಪರೀಕ್ಷೆಗೆ ಖಾಸಗಿ ಆಸ್ಪತ್ರೆ/ಪ್ರಯೋಗಾಲಯಗಳು 300 ರೂ.ಗಳಿಗಿಂತ ಹೆಚ್ಚಿನ ದರ ಪಡೆದಲ್ಲಿ ಅಂತಹ ಆಸ್ಪತ್ರೆ/ಪ್ರಯೋಗಾಲಯಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು.
ಆಸ್ಪತ್ರೆಗಳಲ್ಲಿ ಡೆಂಗ್ಯೂ ಟೆಸ್ಟಿಂಗ್ ಕಿಟ್ ಹಾಗೂ ಔಷಧಗಳ ಕೊರತೆಯಿದ್ದಲ್ಲಿ ಹೊಸದಾಗಿ ಖರೀದಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಲು ಸೂಚನೆ ನೀಡಲಾಗಿದೆ.
ಜಿಲ್ಲೆಯಲ್ಲಿ ದೃಢಪಟ್ಟ 182 ಡೆಂಗ್ಯೂ ಪ್ರಕರಣಗಳಲ್ಲಿ ಜಿಲ್ಲಾಸ್ಪತ್ರೆಯಲ್ಲಿ 9 ರೋಗಿಗಳು ಒಳರೋಗಿಯಾಗಿ ದಾಖಲಾಗಿದ್ದರು. ಈ ಪೈಕಿ ಐಸಿಯುನಲ್ಲಿ 1 ಮಗು ಸೇರಿ 3 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರನ್ನು ಗುಣಮುಖರಾದ ಮೇಲೆ ಬಿಡುಗಡೆ ಮಾಡಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಡೆಂಗ್ಯೂ ರೋಗಿಗಳಿಗೆ ಚಿಕಿತ್ಸೆ ನೀಡಲು 20 ಹಾಸಿಗೆಗಳುಳ್ಳ ಪ್ರತ್ಯೇಕ ವಾರ್ಡ್ ಮೀಸಲಿಡಲಾಗಿದೆ.