ತುಮಕೂರು ಬಂದ್ …ಬಂದ್..! ಹೇಗಿದೆ ಗೊತ್ತಾ ಬಂದ್ ಬಿಸಿ

ತುಮಕೂರು:- ಕಲ್ಪತರು ನಾಡು ತುಮಕೂರು ಜಿಲ್ಲೆ ಇಂದು ಬಂದ್ ಮೂಡಿಗೆ ಜಾರಿದೆ. ನೀರಿಗಾಗಿ ನಡೆಯುತ್ತಿರುವ ಹೋರಾಟದ ಬಂದ್ ಗೆ ಜಿಲ್ಲೆಯಾದ್ಯಂತ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ‘ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ ಯೋಜನೆ’ ರದ್ದು ಪಡಿಸಲು ಒತ್ತಾಯಿಸಿ ಕರೆ ಕೊಟ್ಟಿರುವ ತುಮಕೂರು ಜಿಲ್ಲಾ ಬಂದ್ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಬಂದ್ ಬಿಸಿಯನ್ನು ಮುಟ್ಟಿಸಿದರು ಹೋರಾಟಗಾರರು‌. ಬೆಳ್ಳಂಬೆಳಗ್ಗೆಯೇ ಶ್ರೀ ಶಿವಕುಮಾರ ಸರ್ಕಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಧನಿಯಾಕುಮಾರ್ ನೇತೃತ್ವದಲ್ಲಿ‌ ಹೋರಾಟಗಾರರು ‌ಲಿಂಕ್‌ಕೆನಾಲ್ ರದ್ದು ಮಾಡಬೇಕೆಂದು ಆಗ್ರಹಿಸಿ ಬಂದ್ ನ ಬಿಸಿ ತೋರಿಸಿದರು.

ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್‌ ಕೆನಾಲ್ ಯೋಜನೆ‌ ವಿಚಾರಕ್ಕೆ ಈಗಾಗಲೇ ಕಳೆದ 40 ದಿನಗಳಿಂದ ಹೋರಾಟ ತೀವ್ರವಾಗುತ್ತಲೇ ಬರುತ್ತಿದೆ. ಯೋಜನೆ ಕಾಮಗಾರಿ ಬಳಿ ಈಗಾಗಲೇ ಜಿಲ್ಲೆಯ ಬಿಜೆಪಿ-ಜೆಡಿಎಸ್ ನಾಯಕರು, ಸಂಘಟನೆ ಮುಖಂಡರು ಪಕ್ಷಾತೀತವಾಗಿ ಹೋರಾಟ ನಡೆಸಿದ್ದಾರೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ನಿವಾಸಕ್ಕೆ ‌ಮುತ್ತಿಗೆ ಹಾಕುವ ಯತ್ನದ ಹೋರಾಟವೂ ನಡೆದಿದೆ. ಅದರ ಮುಂದುವರೆದ ಭಾಗವಾಗಿ ಇವತ್ತು ಹೋರಾಟಗಾರರು ಬಂದ್ ಬಿಸಿ‌ ಮುಟ್ಟಿಸಿದ್ದಾರೆ.

ಹೇಗಿದೆ ಗೊತ್ತಾ ಬಂದ್ ಬಿಸಿ: ತುಮಕೂರು ‌ನಗರದಲ್ಲಿ ಬೆಳ್ಳಂಬೆಳಗ್ಗೆ ಬಂದ್ ಬಿಸಿ ಕಾಣಿಸಿತು. ಜನರ ಓಡಾಟ, ವಾಹನಗಳ ಸಂಚಾರ ವಿರಳವಾಗಿತ್ತು. ಬಂದ್ ಹಿನ್ನೆಲೆಯಲ್ಲಿ ಜನ ಏನಿರುತ್ತೆ ಏನಿರಲ್ಲ ಎಂದು ಗೊಂದಲಕ್ಕೆ ಸಿಲುಕಿದ್ದರು. ಇಡೀ ನಗರದ ರಸ್ತೆಗಳೆಲ್ಲಾ ಖಾಲಿ ಖಾಲಿ ಅನಿಸುತ್ತಿದ್ದವು.

ಸಾರಿಗೆಯಲ್ಲಿ ಕಾಣದ ವ್ಯತ್ಯಯ:– ಸಾರಿಗೆ ಸಂಚಾರದಲ್ಲಿ ಯಾವುದೇ ವ್ಯತ್ಯಯ ಕಂಡುಬಂದಿಲ್ಲ. ಎಂದಿನಂತೆ ಸಾರಿಗೆ ಸಂಚಾರ ಸಾಗುತ್ತಿದೆ. ಆದರೆ, ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಬಂದ್ ಗೆ ಬೆಂಬಲ ಕೊಟ್ಟ ಹಿನ್ನೆಲೆಯಲ್ಲಿ ಆಟೋಗಳ ಸಂಚಾರ ವಿರಳವಾಗಿತ್ತು. ಇನ್ನೂ ಸರ್ಕಾರಿ ಬಸ್ ಗಳಲ್ಲಿ ಯಾವುದೇ ವ್ಯತ್ಯಯವಿಲ್ಲ. ಎಂದಿನಂತೆ ತಮ್ಮ ಕಾರ್ಯದಲ್ಲಿ ನಿರತವಾಗಿವೆ. ಆದರೆ ಖಾಸಗಿ ಬಸ್ ಗಳ ಸಂಚಾರದಲ್ಲಿ ಕೊಂಚ ವ್ಯತ್ಯಯ ಕಂಡುಬಂದಿದೆ. ಕೆಲವು ಖಾಸಗಿ ಬಸ್ ಗಳು ರಸ್ತೆಗೆ ಇಳಿದರೆ ಮತ್ತೆ ಕೆಲವು ಬಸ್ ಗಳು ರಸ್ತೆಗೆ ಇಳಿದಿಲ್ಲ.

ಅಂಗಡಿ‌ ಮುಗ್ಗಟ್ಟು ಮಾಲೀಕರಿಂದ ಮಿಶ್ರ ಪ್ರತಿಕ್ರಿಯೆ: ಅಂಗಡಿ ಮುಗ್ಗಟ್ಟುಗಳ ಮಾಲೀಕರು ಸಹ ಮಿಶ್ರ ಪ್ರತಿಕ್ರಿಯೆ ತೋರಿದ್ದಾರೆ. ಅಗತ್ಯ ವಸ್ತುಗಳಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಆದರೆ, ವಾಣಿಜ್ಯ ವಹಿವಾಟು ವ್ಯಾಪಾರದ ಅಂಗಡಿ ಮಳಿಗೆಗಳು ಕೆಲವು ತೆರೆದಿದ್ದರೆ ಇನ್ನೂ ಕೆಲವು ತೆರೆದಿಲ್ಲ.

ಶಾಲಾ-ಕಾಲೇಜು ಎಂದಿನಂತೆ:- ತುಮಕೂರು ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳು ಎಂದಿನಂತೆ ನಡೆಯುತ್ತಿವೆ. ಜಿಲ್ಲಾಧಿಕಾರಿ‌ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ ಎಂದು ಹೇಳಿದ್ದರು. ಹಾಗಾಗಿ ಎಂದಿನಂತೆ ಬೆಳಿಗ್ಗೆಯೇ ವಿದ್ಯಾರ್ಥಿಗಳು ಕಾಲೇಜುಗಳಿಗೆ ಶಾಲೆಗಳಿಗೆ ತೆರಳುತ್ತಿದ್ದ ದೃಶ್ಯ ಕಂಡುಬಂದಿತು

Leave a Reply

Your email address will not be published. Required fields are marked *