ತುಮಕೂರು || ಕೋವಿಡ್ ನಿರ್ಬಂಧ ಸಡಿಲ : ರಸ್ತೆಗಿಳಿದ ವಾಹನಗಳು

ತುಮಕೂರು : ಲಾಕ್‍ಡೌನ್ ನಿರ್ಬಂಧದ ಮೊದಲ ಹಂತ ಸಡಿಲಿಕೆಯಾಗುತ್ತಿದ್ದಂತೆಯೆ ಪ್ರಥಮ ದಿನ ಸೋಮವಾರ ವಾಹನಗಳು ರಸ್ತೆಗೆ ಇಳಿದವು. ಮಧ್ಯಾಹ್ನದವರೆಗೂ ನಗರದಾದ್ಯಂತ ವಾಹನ ದಟ್ಟಣೆ ಕಂಡು ಬಂದಿತು. ಇದರಿಂದಾಗಿ ಲಾಕ್‍ಡೌನ್‍ಗೆ ಹಿಂದೆ ಇದ್ದ ಯಥಾಸ್ಥಿತಿಯನ್ನು ಕಾಣುವಂತಾಯಿತು.

ಸೋಂಕು ಪ್ರಕರಣ ಇಳಿಕೆಯಾಗುತ್ತಿರುವ ಕಾರಣ ಮೊದಲ ಹಂತದ ಅನ್ ಲಾಕ್ ಪ್ರಕ್ರಿಯೆಯನ್ನು ಸರ್ಕಾರ ಘೋಷಿಸಿದೆ. ಮೂರ್ನಾಲ್ಕು ದಿನಗಳ ಹಿಂದೆಯೆ ಈ ಘೋಷಣೆ ಆಗಿದ್ದರಿಂದ ಸಹಜವಾಗಿಯೆ ಜನ ಮನೆಯಿಂದ ಹೊರ ಬರಲು ಕಾತರರಾಗಿದ್ದರು. ತಮ್ಮ ದೈನಂದಿನ ಬದುಕಿನ ಕಡೆಗೆ ಮನಸ್ಸು ಹೊರಳಿಸಿದ್ದರು. ಬಹುತೇಕ ಅಂಗಡಿಗಳು, ವಹಿವಾಟು ಆರಂಭವಾಗುತ್ತದೆ ಎಂಬ ನಿರೀಕ್ಷೆಯಲ್ಲಿಯೆ ಜನತೆ ಕಾಯುತ್ತಿದ್ದರು. ಕಳೆದ ಎರಡು ದಿನಗಳ ಹಿಂದೆ ನಡೆದ ಸಭೆಯಲ್ಲಿ ಕೆಲವೊಂದು ಕ್ಷೇತ್ರಗಳ ವಿನಾಯಿತಿ ನೀಡಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಜನ ಮತ್ತು ವಾಹನ ಸಂಚಾರ ದಟ್ಟಣೆ ಹೆಚ್ಚಾಗಲು ಕಾರಣವಾಯಿತು.

ಜಿಲ್ಲಾಡಳಿತದ ಸೂಚನೆಯೂ ಕೆಲವೊಂದು ಗೊಂದಲಕ್ಕೆ ಕಾರಣವಾಯಿತು. ಎರಡು ದಿನಗಳ ಹಿಂದಿನ ಆದೇಶ ಬದಲಿಸಿ ಭಾನುವಾರ ರಾತ್ರಿ ದಿಢೀರ್ ಆದೇಶ ಬದಲಾಯಿಸಿ ಬಟ್ಟೆ ಅಂಗಡಿಗಳು, ಜ್ಯೂಯಲರಿ ಅಂಗಡಿಗಳನ್ನು ತೆರೆಯಲು ಅನುಮತಿ ಇಲ್ಲ ಎಂಬ ಪ್ರಕಟಣೆ ಹೊರ ಬಿದ್ದಿತು. ಈಗಾಗಲೇ ಇಂತಹ ಕ್ಷೇತ್ರಗಳಲ್ಲಿರುವ ವರ್ತಕರು, ಸಿಬ್ಬಂದಿ ವರ್ಗ, ನೌಕರ ವರ್ಗ ಕೆಲಸಕ್ಕೆ ಹಾಜರಾಗಲು ಸಜ್ಜಾಗಿದ್ದರು. ಆದರೆ ಬೆಳಗ್ಗೆ ಬಾಗಿಲು ತೆರೆಯಲು ಹೋದಾಗ ಅವಕಾಶವಾಗಲಿಲ್ಲ. ಕೆಲವರು ಪತ್ರಿಕೆಗಳ ಮೂಲಕ ಮಾಹಿತಿ ತಿಳಿದು, ಅಂಗಡಿಗಳತ್ತಾ ಸುಳಿಯಲಿಲ್ಲ. ಇನ್ನೂ ಕೆಲವರು ಅಂಗಡಿಗಳಿಗೆ ಬಂದು ವಾಪಸ್ಸು ಆಗುತ್ತಿದ್ದ ದೃಶ್ಯ ಕಂಡು ಬಂದಿತು.

ಎರಡು ದಿನಗಳ ಹಿಂದೆ ಜಿಲ್ಲಾಡಳಿತ ಹೇಳಿದಂತೆ ನಾವು ಅಂಗಡಿ ತೆರೆಯಲು ಸಿದ್ದವಾಗಿದ್ದೇವೆ. ಆದರೆ ಭಾನುವಾರ ರಾತ್ರಿ ಏಕಾಏಕಿ ಮತ್ತೊಂದು ಆದೇಶ ಹೊರಡಿಸಿದ್ದಾರೆ. ಇಂತಹ ಸೂಚನೆಯನ್ನು ಒಂದು ದಿನ ಮುಂಚಿತವಾಗಿ ನೀಡಿದ್ದರೆ ಚೆನ್ನಾಗಿತ್ತು. ನಾವು ಅಂಗಡಿಗಳನ್ನು ತೆರೆಯಲು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದೆವು . ಉದ್ಯೋಗಿಗಳನ್ನು ಬರಲು ಹೇಳಿದ್ದೆವು. ಆದರೆ ದಿಢೀರ್ ಬದಲಾದ ನಿರ್ಧಾರದಿಂದ ಸಾಕಷ್ಟು ತೊಂದರೆಯಾಯಿತು ಎಂಬ ಅಸಮಾಧಾನದ ನುಡಿಗಳು ಕೆಲವು ಕ್ಷೇತ್ರದ ವಲಯದಿಂದ ಕೇಳಿ ಬಂದವು. ಬಟ್ಟೆ ಅಂಗಡಿಗಳ ಹಲವು ವರ್ತಕರು ಈ ಮಾತುಗಳನ್ನು ಹೊರ ಹಾಕುತ್ತಿದ್ದರು.

ಎಂ.ಜಿ ರಸ್ತೆಯಲ್ಲಿ ವಹಿವಾಟು ಇಲ್ಲ :

ಕೆಲವೊಂದು ಕ್ಷೇತ್ರಗಳಿಗೆ ವಿನಾಯಿತಿ ನೀಡಿ ಲಾಕ್‍ಡೌನ್ ಸಡಿಲ ಮಾಡಿದ್ದರೂ ಸಹ ಎಂಜಿರಸ್ತೆಯಲ್ಲಿ ಅಂಗಡಿಗಳು ತೆರೆಯಲಿಲ್ಲ. ಔಷಧ ಅಂಗಡಿಗಳು ಹೊರತು ಪಡಿಸಿದ್ದರೆ ಉಳಿದ ಬಹುತೇಕ ಅಂಗಡಿಗಳು ಬಂದ್ ಆಗಿದ್ದವು. ಯಾವ ಅಂಗಡಿಯನ್ನು ತೆರೆಯಬಾರದು ಎಂದು ಪೋಲಿಸರು ಸೂಚಿಸಿದ್ದಾರೆ. ಆಗಿದ್ದರೆ ಲಾಕ್‍ಡೌನ್ ನಿರ್ಭಂದ ಏಕೆ ತೆರೆವುಗೊಳಿಸಬೇಕಾಗಿತ್ತು ಎಂಬ ಮಾತುಗಳು ಎಂಜಿರಸ್ತೆ ಅಂಗಡಿ ವರ್ತಕ ಸಮುದಾಯದಿಂದ ಕೇಳಿ ಬಂದಿತು.

ಎಂಜಿ ರಸ್ತೆಯಲ್ಲಿ ಈ ದೃಶ್ಯ ಕಂಡು ಬಂದರೆ ಮಂಡಿಪೇಟೆಯ ಚಿತ್ರಣವೆ ಬೇರೆ ಆಗಿತ್ತು. ಸರ್ಕಲ್‍ಯಿಂದ ಆರಂಭವಾಗಿ ಗುಬ್ಬಿಗೇಟ್ ತನಕ ಆ ರಸ್ತೆ ಗಿಜಿಗುಡುತ್ತಿತ್ತು. ಬಹುತೇಕ ಅಂಗಡಿಗಳು ಅಲ್ಲಿ ತೆರೆಯಲ್ಪಟ್ಟಿದ್ದವು. ಜನರು ಸಹ ವ್ಯಾಪಾರ ವಹಿವಾಟಿನಲ್ಲಿ ನಿರತರಾಗಿದ್ದರು. ಆ ಕಡೆಯಿಂದ ಹೋಗಿ ಬರುವ ಮತ್ತು ಮುಖ್ಯರಸ್ತೆಯಿಂದ ಸಂಚರಿಸುವ ವಾಹನಗಳು ಮಂಡಿಪೇಟೆ ರಸ್ತೆಯಲ್ಲಿ ಹೆಚ್ಚಾಗಿದ್ದರಿಂದ ಮಧ್ಯಾಹ್ನ 1 ಗಂಟೆಯವರೆಗೂ ಅಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿ ಕಂಡು ಬಂದಿತು.

ನಗರದಲ್ಲಿ ವಾಹನಗಳ ಯಥಾಸ್ಥಿತಿ :

ಬಿ.ಎಚ್.ರಸ್ತೆ, ಮಂಡಿಪೇಟೆ, ಅಶೋಕರಸ್ತೆ, ಶಿರಾಗೇಟ್ ರಸ್ತೆ, ಎಸ್‍ಎಸ್ ಪುರಂ, ಎಸ್‍ಐಟಿ, ಗುಬ್ಬಿಗೇಟ್ ಮಾರ್ಗ , ಕುಣಿಗಲ್ ರಸ್ತೆಯ ಮಾರ್ಗ, ಹೀಗೆ ಎಲ್ಲಾ ಮುಖ್ಯರಸ್ತೆ ಹಾಗೂ ಸಂಪರ್ಕ ರಸ್ತೆಗಳು ವಾಹನದ ದಟ್ಟಣೆಯಿಂದ ಕೂಡಿದ್ದವು. ಬೆಳಗ್ಗೆ 8 ಗಂಟೆಯಿಂದ ಆರಂಭವಾದ ದಟ್ಟಣೆ ಮಧ್ಯಾಹ್ನದವರೆಗೂ ಮುಂದುವರೆಯಿತು. ಅಗತ್ಯವಸ್ತುಗಳ ಖರೀದಿ ಸಮಯವನ್ನು ಮಧ್ಯಾಹ್ನ 2 ಗಂಟೆಯವರೆಗೂ ವಿಸ್ತರಿಸಿರುವುದರಿಂದ ಜನ ದಟ್ಟಣೆ ವಾಹನ ದಟ್ಟಣೆ, ಸಹಜವಾಗಿಯೆ ಹೆಚ್ಚಾಯಿತು. ಒಟ್ಟಾರೆ ಲಾಕ್‍ಡೌನ್ ಹಿಂದಿನ ಪರಿಸ್ಥಿತಿಯೆ ಮರುಕಳಿಸಿತು.

ಕೆಲವು ಕಡೆ ಜೆರಾಕ್ಸ್, ಪ್ಲಾಸ್ಟಿಕ್ ಇತರೆ ಅಂಗಡಿಗಳು ಸೇರಿದಂತೆ ಬಹುತೇಕ ಎಲ್ಲಾ ರೀತಿಯ ಅಂಗಡಿಗಳು ಓಪನ್ ಆಗಿದ್ದವು. ಮೋಟಾರ್ ಸರ್ವಿಸ್, ಗ್ಯಾರೇಜ್ ಗಳು ಕೆಲಕಾಲ ತೆರೆದಿದ್ದವು. ಆದರೆ ಕೆಲವು ಕಡೆ ಮುಚ್ಚಲ್ಪಟ್ಟಿದ್ದು ಕಂಡು ಬಂದಿತು.

ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಮತ್ತೆ ಕೆಲವು ಇಲಾಖೆಗಳು ಸೋಮವಾರದಿಂದ ಆರಂಭಗೊಂಡಿವೆ. ಅಂಗಡಿಗಳು ತೆರೆಯುತ್ತಿವೆ. ಇದರಿಂದಾಗಿ ಸಹಜವಾಗಿಯೆ ಜನ ಮನೆಯಿಂದ ಹೊರ ಬಂದರು. ಆದರೆ ಮಧ್ಯಾಹ್ನದ ನಂತರ ಜನರ ಓಡಾಟ ಹಾಗೂ ವಾಹನ ಸಂಚಾರ ಕಡಿಮೆಯಾಯಿತು.

ಆಟೋರಿಕ್ಷಾಗಳ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಬಸ್ ಪ್ರಯಾಣಕ್ಕೆ ಅವಕಾಶವಿಲ್ಲ. ಆದರೆ ಜನರು ಸ್ವಂತ ವಾಹನಗಳನ್ನೆ ಬಳಕೆ ಮಾಡುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ.

ಟೋಲ್‍ಬಳಿ ಹೆಚ್ಚಾದ ಕ್ಯೂ :

ಅಂತರ್ ಜಿಲ್ಲೆ ಓಡಾಟಕ್ಕೆ ಅನುಮತಿ ಸಿಕ್ಕಿರುವುದರಿಂದ ಹಾಗೂ ನಿರ್ಭಂದ ಸಡಿಲಿಕೆಯಾಗಿರುವುದರಿಂದ ಗ್ರಾಮೀಣ ಪ್ರದೇಶದ ಜನ ನಗರಗಳಿಗೆ ವಾಪಸ್ಸಾಗುತ್ತಿರುವುದು ಹೆಚ್ಚುತ್ತಿದೆ. ಪರಿಣಾಮವಾಗಿ ತುಮಕೂರಿನ ಕ್ಯಾತ್ಸಂದ್ರ ಬಳಿ ಇರುವ ಟೋಲ್ ಹಾಗೂ ನೆಲ ಮಂಗಲ ಬಳಿ ಇರುವ ಟೋಲ್‍ಗೇಟ್ ಬಳಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಹಳ್ಳಿಯಿಂದ ಮತ್ತೆ ನಗರಕ್ಕೆ ಹೋಗುವವರು ಹೆಚ್ಚುತ್ತಿರುವುದರಿಂದ ವಾಹನಗಳ ದಟ್ಟಣೆಯೂ ಹೆಚ್ಚಾಗಿವೆ.

ನಿರ್ಬಂಧದಲ್ಲಿ ತಾರತಮ್ಯ ಏಕೆ?

ಕೆಲವು ಕ್ಷೇತ್ರಗಳಿಗೆ ವಿನಾಯಿತಿ ನೀಡಿ ಮತ್ತೆ ಕೆಲವು ಕ್ಷೇತ್ರಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಹೋಟೆಲ್‍ಗಳಲ್ಲಿ ಪಾರ್ಸೆಲ್‍ಗೆ ಅವಕಾಶವಿದೆ. ಆದರೆ ಮಧ್ಯಾಹ್ನ 1-30ರ ನಂತರ ಹೋಟೆಲ್‍ಗಳನ್ನು ಸಹ ಮುಚ್ಚಿಸುವ ಪ್ರಯತ್ನ ಮಾಡಿದರು. ಹೀಗೇಕೆ ಮಾಡಬೇಕು ಎನ್ನುತ್ತಾರೆ ಕೆಲವರು. ಹೋಟೆಲ್‍ನಲ್ಲಿ ಕುಳಿತುಕೊಳ್ಳಲು ಅವಕಾಶ ಬೇಡ. ಆದರೆ ಪಾರ್ಸೆಲ್‍ಗೆ ಅವಕಾಶ ನೀಡಬಹುದಲ್ಲ ಎಂಬುದು ಕೆಲವರ ವಾದ.

 ಪುಸ್ತಕದ ಅಂಗಡಿಗೆ ಅವಕಾಶ ಕೊಡಿ :

ಈಗ ಹಲವು ಕೋರ್ಸ್‍ಗಳಿಗೆ ಆನ್‍ಲೈನ್ ತರಗತಿಗಳು ನಡೆಯುತ್ತಿವೆ. ಬಿಎ, ಬಿಎಸ್ಸಿ, ಬಿಕಾಂ, ಮತ್ತಿತ್ತರ ವಿದ್ಯಾರ್ಥಿಗಳು ಆನ್‍ಲೈನ್ ಪಾಠ ಕೇಳುತ್ತಿದ್ದಾರೆ. ಇನ್ನೂ ಕೆಲವರು ಮುಂದಿನ ಪರೀಕ್ಷೆಗೆ ಸಿದ್ದತೆ ನಡೆಸಿದ್ದಾರೆ. ಇಂತಹವರಿಗೆಲ್ಲಾ ಕೆಲವು ಪುಸ್ತಕಗಳು ಅನಿವಾರ್ಯ. ಅಲ್ಲದೆ ಮನೆಯಲ್ಲೇ ವಿದ್ಯಾರ್ಥಿಗಳು ಇರುವುದರಿಂದ ಪಠ್ಯೇತರ ಕೆಲವು ಪುಸ್ತಕಗಳ ಅವಶ್ಯಕತೆಯೂ ಇರುತ್ತದೆ. ನಮಗೂ ಕೆಲವರು ಕರೆ ಮಾಡಿ ಕೇಳುತ್ತಿದ್ದಾರೆ. ಪುಸ್ತಕ ಒದಗಿಸಲು ಆಗುತ್ತಿಲ್ಲ. ವಿದ್ಯಾರ್ಥಿಗಳ ಮತ್ತು ಪೋಷಕರ ಹಿತದೃಷ್ಟಿಯಿಂದ ಬೆಳಗಿನ ಮೂರು ಗಂಟೆಯ ಅವಧಿಯಲ್ಲಿ ಪುಸ್ತಕದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದರೆ ಮಾರ್ಗಸೂಚಿ ಅನುಸರಿಸಿ ಪುಸ್ತಕ ವಿತರಣೆ ಮಾಡಲು ಸಿದ್ದರಿದ್ದೇವೆ. ಆದರೆ ಅದಕ್ಕೆ ಒಪ್ಪುತ್ತಿಲ್ಲ. ಈ ವಿಷಯದಲ್ಲಿ ಸ್ವಲ್ಪ ಸಡಿಲಿಕೆ ಇದ್ದರೆ ಉತ್ತಮ ಅಲ್ಲವೇ ಎನ್ನುತ್ತಾರೆ ಎಂಜಿರಸ್ತೆಯ ಪುಸ್ತಕ ಅಂಗಡಿ ಮಾಲೀಕ ಕುಮಾರ್.

Pragati TV Social Connect for more latest u

Leave a Reply

Your email address will not be published. Required fields are marked *