ತುಮಕೂರು:- ರೈತರೊಬ್ಬರ ಜಮೀನಿನಲ್ಲಿ ಬೋರ್ ವೆಲ್ ಕೊರೆಸಲು ಪಾಯಿಂಟ್ ಮಾಡಿಸಲು ಲಂಚದ ಹಣಕ್ಕೆ ಬೇಡಿಕೆ ಇಟ್ಟ ಆರೋಪ ಸಾಬೀತಾಗಿದ್ದು, ನ್ಯಾಯಾಲಯ ಭೂವಿಜ್ಞಾನಿ ಟಿ.ವೆಂಕಟೇಶ್ ಗೆ 3 ವರ್ಷ 6ತಿಂಗಳು ಕಠಿಣ ಸಜೆ, 15 ಸಾವಿರ ದಂಡ ವಿಧಿಸಿದೆ. ದಂಡ ಕಟ್ಟಲು ವಿಫಲನಾದರೆ ಮತ್ತೆ 6 ತಿಂಗಳು ಕಠಿಣ ಸಜೆ ನೀಡಿ ಆದೇಶಿಸಿದೆ.
ತುಮಕೂರಿನ ಜಿಲ್ಲಾ ಅಂತರ್ಜಲ ಕಚೇರಿಯ ಭೂ ವಿಜ್ಞಾನಿ ಟಿ. ವೆಂಕಟೇಶ್ ತುಮಕೂರು ತಾಲೂಕು ಬೆಳ್ಳಾವಿ ಹೋಬಳಿಯ ಗೌಡಿಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಸಿದ್ದಪ್ಪನವರ ಜಮೀನಿನಲ್ಲಿ ಬೋರ್ ವೆಲ್ ಕೊರೆಸಲು ಪಾಯಿಂಟ್ ಮಾಡಿಸಲು ನೋಂದಣಿಯ ಶುಲ್ಕ 1500 ರೂ. ಬದಲು 3000 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚದ ಹಣಕ್ಕೆಬೇಡಿಕೆ ಇಟ್ಟಿರುವ ಬಗ್ಗೆ ಭೂವಿಜ್ಞಾನಿ ಟಿ ವೆಂಕಟೇಶ್ ವಿರುದ್ಧ ತುಮಕೂರು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಟಿ.ಪಿ. ರಾಮಲಿಂಗೇಗೌಡ ಅವರು ಟಿ.ವೆಂಕಟೇಶ್ ಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅಭಿಯೋಜಕರಾದ ಆರ್.ಪಿ. ಪ್ರಕಾಶ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.