ತುಮಕೂರು: ಜಿಲ್ಲೆಯ ವಿವಿಧೆಡೆ ಐವರ ಮೇಲೆ ದಾಳಿ ಮಾಡಿದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ.
ಬುಧವಾರ ಸಂಜೆ 4 ಗಂಟೆಯ ಸುಮಾರಿಗೆ ನಡುವನಹಳ್ಳಿ ಗ್ರಾಮದ ಶಿವಣ್ಣ ಎಂಬವರ ಪತ್ನಿ ವನಜಾಕ್ಷಿ ತಮ್ಮ ತೋಟದಲ್ಲಿ ದನಗಳನ್ನು ಮೇಯಿಸುತ್ತಿದ್ದಾಗ ಚಿರತೆ ದಾಳಿ ಮಾಡಿತ್ತು. ನಂತರ ಗೋಣಿ ತುಮಕೂರಿನತ್ತ ಓಡಿ ಹೋಗಿ, ತೋಟದಲ್ಲಿದ್ದ ಹುಚ್ಚಮ್ಮ ಎಂಬವರ ಮೇಲೂ ದಾಳಿ ಮಾಡಿದೆ. ಬಳಿಕ ಬೋರೆಗೌಡ ಎಂಬವರ ಮೇಲೂ ಎರಗಿತ್ತು. ಕೊನೆಗೆ, ದೇವಿಹಳ್ಳಿಯ ಶೇಖರ್ ಎಂಬವರ ಮನೆಗೆ ಹೋಗಿ ಅವಿತುಕೊಂಡಿತ್ತು.
ಸುದ್ದಿ ತಿಳಿದು ಮೈಸೂರಿನಿಂದ ಆಗಮಿಸಿದ್ದ ಅರಣ್ಯ ಇಲಾಖೆಯ ವಿಶೇಷ ತಂಡ ಸತತ ನಾಲ್ಕು ಗಂಟೆಗಳ ಬಳಿಕ, ಚಿರತೆಗೆ ಅರಿವಳಿಕೆ ನೀಡಿ ಸೆರೆಹಿಡಿಯುವಲ್ಲಿ ಯಶಸ್ವಿಯಾದರು. ಚಿರತೆ ಬಲೆಗೆ ಬೀಳುತ್ತಿದ್ದಂತೆ ತುರುವೆಕೆರೆ ತಾಲೂಕಿನ ದೇವಿಹಳ್ಳಿ ಗ್ರಾಮಸ್ಥರು ನಿಟ್ಟುಸಿರುಬಿಟ್ಟರು.
ಇತ್ತೀಚಿಗೆ, ಚಾಮರಾಜನಗರದಲ್ಲಿ ಬಹಿರ್ದೆಸೆಗೆ ತೆರಳಿದ್ದಾಗ ನಡೆದ ಕಾಡಾನೆ ದಾಳಿಯಿಂದ ಪ್ರವಾಸಿಗರೊಬ್ಬರು ಸಾವನ್ನಪ್ಪಿದ್ದರು. ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಅಸುನೀಗಿದ್ದರು. ಚಿಕ್ಕಬಳ್ಳಾಪುರದಲ್ಲಿ ಹಸು ಮೇಯಿಸಲು ಹೋಗಿದ್ದ ರೈತನ ಮೇಲೆ ಚಿರತೆ ದಾಳಿ ಮಾಡಿತ್ತು.