ತುಮಕೂರು:- ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ, ಪಾರದರ್ಶಕ ಮತ್ತು ಜನಪರ ಆಡಳಿತಕ್ಕೆ ಹೆಸರಾಗಿ ಜನಸ್ನೇಹಿ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜಾ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ.
ಮಹಾನಗರ ಪಾಲಿಕೆಯನ್ನು ಭ್ರಷ್ಟ ಮುಕ್ತಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿದ್ದ ಆಯುಕ್ತ ಬಿ.ವಿ.ಅಶ್ವಿಜ ಅವರು ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಹಾಕಿದ್ದ ಅಶ್ವಿಜರನ್ನು ವರ್ಷ ತುಂಬುವುದರಲ್ಲೇ ವರ್ಗಾವಣೆ ಮಾಡಲಾಗಿದೆ.
ಅಶ್ವಿಜ ವರ್ಗಾವಣೆಯಿಂದ ತೆರವಾಗಿರುವ ಸ್ಥಾನಕ್ಕೆ ಕೆಎಎಸ್ ಅಧಿಕಾರಿ ಡಾ.ಜಗದೀಶ್ ಕೆ.ನಾಯಕ್‌ರನ್ನು ನೇಮಿಸಿ ಮಂಗಳವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಶ್ವಿಜ ಅವರಿಗೆ ಯಾವುದೇ ಸ್ಥಳವನ್ನು ತೋರಿಸಿಲ್ಲ. ಸಹಕಾರ ಸಚಿವ ಕೆ.ಎನ್.ರಾಜಣ್ಣ ಶಿಫಾರಿಸಿನಂತೆ ಜಗದೀಶ್‌ರನ್ನು ಪಾಲಿಕೆಗೆ ವರ್ಗಾಯಿಸಲಾಗಿದೆ ಎನ್ನಲಾಗಿದೆ.
ಕೆಲವೇ ತಿಂಗಳಲ್ಲಿ ಜನರಿಗೆ ಅಚ್ಚುಮೆಚ್ಚು:- ಬಿ.ವಿ. ಅಶ್ವಿಜಾ ಅವರು ಪಾಲಿಕೆ ಆಯುಕ್ತರಾಗಿ ಬಂದ ಕೆಲವೇ ತಿಂಗಳಲ್ಲಿ ಜನಸ್ನೇಹಿ ಆಡಳಿತಕ್ಕೆ ಹೆಸರುವಾಸಿಯಾಗಿ ಜನಮನ್ನಣೆ ಪಡೆದಿದ್ದರು. ಜನಸಾಮಾನ್ಯರ ಸಮಸ್ಯೆ ಬಗೆಹರಿಸಲು ಸದಾ ಮುಂದಿರುತ್ತಿದ್ದರು. ಯಾವುದೇ ಕೆಲಸ ಇದ್ದರೂ ಜನರ ಸಮಸ್ಯೆಯನ್ನ ಮೊದಲು ಆಲಿಸುತ್ತಿದ್ದರು. ಜು.25, 2023ರಂದು ತುಮಕೂರು ಪಾಲಿಕೆ ಆಯುಕ್ತರನ್ನಾಗಿ 2019ನೇ ಬ್ಯಾಚ್ ಐಎಎಸ್ ಅಧಿಕಾರಿ ಬಿ.ವಿ.ಅಶ್ವಿಜರನ್ನು ನೇಮಿಸಿ ಸರ್ಕಾರ ಆದೇಶಿಸಿತ್ತು. ಬಂದ ಕೆಲವೇ ದಿನಗಳಲ್ಲಿ ಪುಟ್ ಪಾತ್ ತೆರವು
ಅಭಿಯಾನಕ್ಕೆ ಚಾಲನೆ ನೀಡಿದ್ದ ಅಶ್ವಿಜ ಅಕ್ರಮವಾಗಿ ಪುಟ್ ಪಾತ್ ಒತ್ತುವರಿದಾರರಿಗೆ ಸಿಂಹಸ್ವಪ್ನರಾಗಿದ್ದರು. ಅಶ್ವಿಜ ಪತಿ ಕೆ.ವಿ.ಅಶೋಕ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತಿ. ಪತ್ನಿ ಒಂದೇ ಜಿಲ್ಲೆಯಲ್ಲಿ ಸೇವೆ ಮಾಡುವ ಅವಕಾಶ ಪಡೆದಿದ್ದರು. ಜೊತೆಯಾಗಿ ಉತ್ತಮ ಕೆಲಸವನ್ನು ಮಾಡುವಲ್ಲಿ ಮನ್ನಣೆ ಪಡೆದಿದ್ದರು.
ಅಶ್ವಿಜಾ ಅವರಿಂದ ಜನಪರ ಕಾರ್ಯಕ್ರಮ: ಅಶ್ವಿಜಾ ಅವರು ಪಾಲಿಕೆಗೆ ಬಂದ ಕೆಲವೇ ತಿಂಗಳಲ್ಲಿ ಜನರಿಗಾಗಿಯೇ ತ್ವರಿತ ಸೇವೆ ಅದಾಲತ್ ಕಾರ್ಯಕ್ರಮ ಮಾಡಿ ಭಾರಿ ಮೆಚ್ಚುಗೆಗೆ ಪಾತ್ರರಾದರು. ಸಾವಿರಾರು ಸಾರ್ವಜನಿಕರು ಈ ಅದಾಲತ್ ಉಪಯೋಗ ಪಡೆದುಕೊಂಡರು. ಎಷ್ಟೋ ದಿನಗಳಿಂದ ಬಾಕಿ ಉಳಿದುಕೊಂಡು ಕೆಲಸ ಆಗದೆ ಅಲೆದಾಡುತ್ತಿದ್ದವರು ಅದಾಲತ್ ನಲ್ಲಿ ಒಂದೇ ದಿನ ಸಮಸ್ಯೆ ಬಗೆಹರಿಸಿಕೊಂಡರು. ಇನ್ನು ಸಮಸ್ಯೆಗಳಿರುವ ವಾರ್ಡ್ ಗಳಿಗೆ ತಾವೇ ಖುದ್ದು ಭೇಟಿ ನೀಡಿ ಸಮಸ್ಯೆ ಆಲಿಸುತ್ತಿದ್ದರು. ಸ್ಥಳದಲ್ಲೇ ಅಧಿಕಾರಿಗಳಿಂದ ಸಮಸ್ಯೆಗಳಿಗೆ ಮುಕ್ತಿ ಕೊಡಿಸುತ್ತಿದ್ದರು.
*ಬೀದಿನಾಯಿಗೆ ಕಡಿವಾಣ:- ನಗರದಲ್ಲಿ ಹೆಚ್ಚಾಗಿದ್ದ ಬೀದಿ ನಾಯಿಗಳ ಕಡಿವಾಣಹಾಕುವಲ್ಲಿ ಅಶ್ವಿಜಾ ಒಂದು ಹೆಜ್ಜೆ ಮುಂದೆಯೇ ಇದ್ದರು. ನಗರದಲ್ಲಿ ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿ ಶ್ವಾನಗಳ ಸಂತಾನೋತ್ಪತ್ತಿಗೆ ಬ್ರೇಕ್ ಹಾಕಿದ್ದಾರೆ. ನಾಯಿ ಕಡಿತಕ್ಕೊಳಗಾದವರಿಗೆ ಪರಿಹಾರವನ್ನೂ ಸಹ ಕೊಟ್ಟಿದ್ದಾರೆ. ಇನ್ನು ನಗರದಲ್ಲಿ ಎಲ್ಲೆಂದರಲ್ಲಿ ಕಸ ಹಾಕುವುದಕ್ಕೆ ಕಡಿವಾಣ ಹಾಕಿದ್ದಾರೆ. ಪಾಲಿಕೆಯಿಂದ ಒಂದು ತಂಡ ರಚನೆ ಮಾಡಿ ಎಲ್ಲೆಂದರಲ್ಲಿ ಕಸ ಹಾಕುವವರಿಗೆ ದಂಡದ ಅಸ್ತ್ರ ಉಪಯೋಗಿಸಿದ್ದರು. ಇದರಿಂದ ಕಸದ ಸಮಸ್ಯೆ ನಿವಾರಣೆಯಾಗಿತ್ತು. ಜೊತೆಗೆ ಯುಜಿಡಿ ಸಮಸ್ಯೆಯ ಪರಿಹಾರಕ್ಕೂ ಒತ್ತು ನೀಡಿದ್ದ ಅವರು, ಮಳೆಗಾದಲ್ಲಿ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆಯ ಕ್ರಮಕೈಗೊಂಡಿದ್ದರು.ಇದಕ್ಕಾಗಿ ಅಧಿಕಾರಿಗಳ ವಾಟ್ಸ್ ಆಪ್ ಗ್ರೂಪ್ ಸಹ ಮಾಡಿದ್ದರು.
ಚುನಾವಣೆ ಯಶಸ್ಸು:- ತುಮಕೂರು ಲೋಕಸಭಾ ಚುನಾವಣೆಯನ್ನು ಯಾವುದೇ ಸಮಸ್ಯೆಯಾಗದಂತೆ ಯಶಸ್ವಿಯಾಗಿ ಮಾಡಿದ್ದು ಸಹ ಇವರ ಕೀರ್ತಿಗೆ ಸಲ್ಲಲಿದ್ದು, ಕಳೆದ ಲೋಕಸಭಾ ಚುನಾವಣೆಗಿಂತ ಶೇ.2%ಮತದಾನ ಪ್ರಮಾಣ ಹೆಚ್ಚಾಗಿತ್ತು.ಇದಕ್ಕಾಗಿ ಅಶ್ವಿಜಾ ಅವರು ವಿಶೇಷ ಮತಗಟ್ಟೆ ಕೇಂದ್ರ ತೆರೆದಿದ್ದರು. ಮತದಾನ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ಎಲ್ಲದರ ಪರಿಣಾಮ ಮತದಾನ ಪ್ರಮಾಣ ಹೆಚ್ಚಾಗಿತ್ತು.