ತುಮಕೂರು || ನಿಧಿಗಾಗಿ ಶೋಧ ಶಂಕೆ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ತುಮಕೂರು :- ನಿಧಿಗಾಗಿ ಶ್ರೀ ಆಂಜನೇಯ ಸ್ವಾಮಿ ಕೆತ್ತನೆಯಿರುವ ಬಂಡೆಯನ್ನೇ ಕೊರೆದಿರುವ ಘಟನೆ ತುಮಕೂರು ತಾಲೂಕಿನ ವಡ್ಢರಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ತುಮಕೂರಿನ ಬೆಳಗುಂಬ ಸನಿಹದ ವಡ್ಡರಹಳ್ಳಿ ಗ್ರಾಮದಲ್ಲಿರುವ ಪುರಾತನ ಬನವಾಸಿ ಶ್ರೀ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ನಿಧಿಗಾಗಿ ಶೋಧ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಮೂರು ಕಡೆ ಬಂಡೆ ಕೊರೆದಿದ್ದಾರೆ:- ಬನವಾಸಿ ಶ್ರೀ ಆಂಜನೇಯಸ್ವಾಮಿ ಸನ್ನಿಧಿಯಲ್ಲಿ ಆಂಜನೇಯನ ಕೆತ್ತನೆಯಿರುವ ಬೃಹತ್ ಬಂಡೆಯಿದೆ. ಇದನ್ನು ಸುತ್ತಮುತ್ತಲಿನ ಗ್ರಾಮಸ್ಥರು ನಂಬಿಕೆಯಿಂದ ಪೂಜಿಸುತ್ತಾರೆ. ಇದೇ ಬಂಡೆಯನ್ನು ಮೂರು ಕಡೆ ರಾತ್ರೋ ರಾತ್ರಿ ಕೊರೆದು ನಂತರ ಕೊರೆದ ಜಾಗಕ್ಕೆ ಸೀಮೆಂಟ್ ಹಾಕಿ ಮುಚ್ಚಿ ಗೊತ್ತಾಗಬಾರದೆಂದು ಬಣ್ಣವನ್ನು ಬಳಿದಿದ್ದಾರೆ‌. ಬಂಡೆ ಕೊರೆದ ನಂತರ ಹೊರ ಬಂದಿರುವ ಬಂಡೆ ಚೂರು, ಪೂಜೆ ಮಾಡಿರುವ ತೆಂಗಿನಕಾಯಿ, ವಸ್ತ್ರವನ್ನು ದೇವಸ್ಥಾನದಲ್ಲಿಯೇ ಬಿಟ್ಟು‌ ಪರಾರಿಯಾಗಿದ್ದಾರೆ. ನಿಧಿಗಾಗಿ ಈ ಬಂಡೆಯನ್ನು ಕೊರೆದು ಸ್ವಾಮಿಯನ್ನು ಬಿನ್ನ ಮಾಡಿದ್ದಾರೆ ಎಂಬುದನ್ನು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

15 ವರ್ಷದ ಹಿಂದೆ ನಿಧಿಗಾಗಿ ಜಾಗ ಕೇಳಿದ್ದರಂತೆ: ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ‌ ನಿಧಿ ಇದೆ ಎಂಬ ಕಾರಣಕ್ಕೆ ಕಳೆದ 15 ವರ್ಷಗಳ ಹಿಂದೆ ಸ್ವಾಮೀಜಿಗಳೊಬ್ಬರು ಜಾಗವನ್ನು ಕೊಡಿ ಮಠವನ್ನು ಕಟ್ಟುತ್ತೇವೆ ಎಂದಿದ್ದರಂತೆ. ಆದರೆ, ಗ್ರಾಮಸ್ಥರು ಒಪ್ಪಿರಲಿಲ್ಲ. ಇದಾದ ಬಳಿಕ‌ ಆಗಿದ್ದಾಂಗೆ ನಿಧಿ ಇದೆ. ಶ್ರೀ ಆಂಜನೇಯ ಸ್ವಾಮಿ ಅದನ್ನು ಕಾಪಾಡುತ್ತಿದ್ದಾರೆ. ಈ ಭಾಗದಲ್ಲಿ ಸಂಚರಿಸುತ್ತಿದ್ದಾನೆ ಎಂಬ ಮಾತುಗಳು ಗ್ರಾಮಸ್ಥರ ಬಾಯಲ್ಲಿ‌ ಹರಿದಾಡಿತ್ತು. ಹೀಗಾಗಿ ನಿಧಿ ಕಳ್ಳರು ಶ್ರೀ ಆಂಜನೇಯ ಸ್ವಾಮಿಯನ್ನು ಭಿನ್ನ ಮಾಡಿದರೆ, ಸ್ವಾಮಿ ನಿಧಿ ಕಾಯುವಿಕೆಗೆ ಬರುವುದಿಲ್ಲ ಎಂಬ ಹಿನ್ನೆಲೆಯಲ್ಲಿ ಬಂಡೆ ಕೊರೆದು ಏನೋ ಮಾಠ ಮಂತ್ರ ಮಾಡಿ ನಿಧಿಗಾಗಿ ಶೋಧಕ್ಕೆ‌ ಮುಂದಾಗಿದ್ದಾರೆ ಎಂಬುದನ್ನು ಸಹ ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.

ಸುಮಾರು 800 ವರ್ಷಗಳ ಇತಿಹಾಸವುಳ್ಳ ಬನವಾಸಿ ಶ್ರೀ ಆಂಜನೇಯ ಸ್ವಾಮಿ ನಮ್ಮ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮವನ್ನೂ ಕಾಪಾಡುತ್ತಿದೆ. ಜನ-ಜಾನುವಾರು ಕಳೆದು ಹೋದಲ್ಲಿ ಇಲ್ಲಿ ಬಂದು ಬೇಡಿಕೊಂಡರೆ ಸಿಗುತ್ತದೆ ಎಂಬ ನಂಬಿಕೆಯೂ ಇದೆ. ಸ್ವಾಮಿಗೆ ಎಲ್ಲಾ ರೀತಿಯ ಪೂಜೆಗಳು ನಡೆಯುತ್ತವೆ.

ನಿಧಿಗಾಗಿ ಸ್ವಾಮಿ ಸನ್ನಿಧಿಯಲ್ಲಿ ನಿಧಿ ಕಳ್ಳರು ಶೋಧ ಮಾಡಿರುವ ಶಂಕೆಯಿದೆ. ಆಂಜನೇಯ ಸ್ವಾಮಿ ಇರುವ ಬಂಡೆಯನ್ನು ಕೊರೆದು ಮತ್ತೆ ಆ ಜಾಗವನ್ನ ಮುಚ್ಚಿ ಬಣ್ಣ ಬಳಿದಿದ್ದಾರೆ. ಹಾಗಾಗಿ ಪೊಲೀಸ್ ಇಲಾಖೆಗೂ ಮಾಹಿತಿ ತಿಳಿಸಿದ್ದೇವೆ. ನಿಧಿಗಳ್ಳರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ರಾಜು.

ಪುರಾತನ ಕಾಲದ ದೇವಾಲಯ ಇದು. ಗ್ರಾಮಸ್ಥರ ನಂಬಿಕೆಯುಳ್ಳ ಶ್ರೀ ಆಂಜನೇಯ ಸನ್ನಿಧಿಯಲ್ಲಿ ನಿಧಿಗಾಗಿ‌ ಶೋಧ ಮಾಡಿರುವ ಅನುಮಾನ ನಮಗಿದೆ. ದೇವಾಲಯಕ್ಕೆ ಸಂಬಂಧಪಟ್ಟ ಇಲಾಖೆ ಭದ್ರತೆ ಕಲ್ಪಿಸಬೇಕು ಎನ್ನುತ್ತಾರೆ ತಾಲೂಕು ಪಂಚಾಯತಿ ಸದಸ್ಯ ಗಂಗಹನುಮಯ್ಯ

Leave a Reply

Your email address will not be published. Required fields are marked *