ತುಮಕೂರು:- ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸಂಭವಿಸಿದ ಅಗ್ನಿ ಅವಘಡಕ್ಕೆ ಮೂವರು ವಿದ್ಯಾರ್ಥಿನಿಯರು ಅಸ್ವಸ್ಥರಾದ ಘಟನೆ ತುಮಕೂರು ನಗರದಲ್ಲಿ ಶುಕ್ರವಾರ ಸಂಜೆ ನಡೆಯಿತು.
ಸಮಾಜ ಕಲ್ಯಾಣ ಇಲಾಖೆಯ ನಗರದ ಬಿ ಎಚ್ ರಸ್ತೆಯ ಬಾಲಕಿಯರ ಹಾಸ್ಟೆಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಅಗ್ನಿ ಅವಘಡದಿಂದಾಗಿ ಮೂವರು ವಿದ್ಯಾರ್ಥಿನಿರು ಅಸ್ವಸ್ಥರಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ವಿದ್ಯಾರ್ಥಿನಿಯರು ಆತಂಕದಿಂದ ಹೊರಬಂದು ಪ್ರಾಣವನ್ನು ರಕ್ಷಿಸಿಕೊಂಡರು. ಆದರೂ ಹೊಗೆಯಿಂದ ಅಸ್ವಸ್ಥಗೊಂಡಿದ್ದ ಮೂವರು ವಿದ್ಯಾರ್ಥಿನಿಯರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಹಾಸ್ಟೆಲ್‌ನಲ್ಲಿ 300 ವಿದ್ಯಾರ್ಥಿನಿಯರು ಇದ್ದರು ಎಂದು ತಿಳಿದು ಬಂದಿದೆ.
ಅಗ್ನಿ ಅವಘಡದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.
ಅಗ್ನಿ ಅವಘಡ ಸಂಭವಿಸುತ್ತಿದ್ದಂತೆ ವಿದ್ಯಾರ್ಥಿನಿಯರು ಹಾಸ್ಟೆಲ್ ನಿಂದ ಹೊರ ಓಡಿಬಂದು ತಮ್ಮ ಪ್ರಾಣ ರಕ್ಷಸಿಕೊಂಡರು. ಕೆಲ ಸಮಯ ಆತಂಕದ ವಾತಾವರಣ ಕಂಡುಬಂದಿತು. ವಿದ್ಯಾರ್ಥಿನಿಯರಲ್ಲಿ ಭಯದ ವಾತಾವರಣ ಮೂಡಿತ್ತು. ಅಗ್ನಿ ನಂದಿಸಿದ ಬಳಿಕ ಹಾಸ್ಟೆಲ್ ಸೇರಿದರು ವಿದ್ಯಾರ್ಥಿನಿಯರು.
ಹಾಸ್ಟೆಲ್ ನಲ್ಲಿ ಯಾವುದೇ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿ ಇಲ್ಲ. ಗುಣಮಟ್ಟದ ವಿದ್ಯುತ್ ಉಪಕರಣಗಳನ್ನು ಅಳವಡಿಸಿದ್ದರೆ ಈ ತರಹದ ಘಟನೆ ನಡೆಯುತ್ತಿರಲಿಲ್ಲ. ಜೊತೆಗೆ ಕಿಟಕಿ, ಬಾಗಿಲುಗಳೂ ಭದ್ರವಾಗಿಲ್ಲ ಎಂದು ಹೆಸರನ್ನೇಳಲಿಚ್ಚಿಸದ ವಿದ್ಯಾರ್ಥಿಗಳು ತಮ್ಮ ಆಕ್ರೋಶ ಹೊರ ಹಾಕಿದರು.
ಘಟನಾ ಸ್ಥಳಕ್ಕೆ ದೌಡಾಯಿಸಿದ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು. ಜೊತೆಗೆ ಅಧಿಕಾರಿಗಳು, ಹಾಸ್ಟೆಲ್ ವಾರ್ಡನ್ ಹಾಗೂ ವಿದ್ಯಾರ್ಥಿನಿಯರ ಜೊತೆ ಡಿಸಿ ಶುಭಕಲ್ಯಾಣ್ ಅವರು ಮಾತುಕತೆ , ಘಟನೆ ಬಗ್ಗೆ ಮಾಹಿತಿಯನ್ನ ಪಡೆದುಕೊಂಡರು. ಈ ಘಟನೆ ಹೊಸ ಬಡಾವಣೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.