ತುಮಕೂರು : ಸರ್ಕಾರಗಳು ಕೋಟಿ ಕೋಟಿ ಅನುದಾನವನ್ನ ಗ್ರಾಮೀಣ ಪ್ರದೇಶದ ರಸ್ತೆ ನಿರ್ಮಾಣಗಳಿಗೆ ವಿನಿಯೋಗ ಮಾಡುತ್ತವೆ. ಆದರೆ ಗ್ರಾಮೀಣ ಪ್ರದೇಶದ ರಸ್ತೆಗಳು ಮಾತ್ರ ಸುಧಾರಿಸಿಲ್ಲ. ಇದು ಸರ್ಕಾರದ ತಪ್ಪೋ ಅಥವಾ ಅಧಿಕಾರಿಗಳ ತಪ್ಪೋ ಇದನ್ನು ಮಾಡುವ ಗುತ್ತಿಗೆದಾರನ ತಪ್ಪೋ ಗೊತ್ತಿಲ್ಲ. ಆದರೆ ಗ್ರಾಮೀಣ ಪ್ರದೇಶದ ಕೆಲವು ಭಾಗದಲ್ಲಿ ಸ್ವತಹ ಸ್ಥಳೀಯ ಸಾರ್ವಜನಿಕರೇ ತಾವು ಓಡಾಡುವುದಕ್ಕೆ ರಸ್ತೆಗಳ ದುರಸ್ಥಿಯನ್ನು ಮಾಡಿಕೊಂಡಿದ್ದಾರೆ. ಆದರೆ ಕೆಲವು ಅಧಿಕಾರಿಗಳು ಇಂತಹ ರಸ್ತೆಗಳನ್ನೇ ಹಾಳು ಮಾಡುತ್ತಿದ್ದಾರೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ತುಮಕೂರು ಗ್ರಾಮಾಂತರದ ನರಸಾಪುರ ಗ್ರಾಮದಲ್ಲಿ ಆಗಿರುವ ರಸ್ತೆ.
ಹೌದು,,, ತುಮಕೂರು ಗ್ರಾಮಾಂತರ ಬುಗುಡನಹಳ್ಳಿ ಕೆರೆಗೆ ಹೇಮಾವತಿ ನೀರು ಬರುವ ಕೆನಾಲ್ ಪಕ್ಕದಲ್ಲಿ ನರಸಾಪುರ ಎಂಬ ಗ್ರಾಮವಿದ್ದು, ಕೆನಾಲ್ ಗೆ ಹೊಂದಿಕೊಂಡಂತೆ ಸುಮಾರು 10 ಕ್ಕಿಂತ ಹೆಚ್ಚು ಮನೆಗಳಿವೆ. ಈ ಮನೆಗಳಿಗೆ ಓಡಾಡುವುದಕ್ಕೆ ಇರುವುದು ಇದೊಂದೇ ರಸ್ತೆ. ಈ ರಸ್ತೆ ಮೊದಲೆಲ್ಲ ಕೂಡ ಹಳ್ಳ ದಿಬ್ಬಗಳಿಂದ ಕೂಡಿತ್ತು. ಸ್ಥಳೀಯರು ಮತ್ತು ಅನಂತರಾಜು ಅಗ್ನಿವಂಶಿ ಎಂಬುವವರು ತಮ್ಮ ಸತಃ ಶ್ರಮ ಹಾಕಿ ಹಣವನ್ನು ಖರ್ಚು ಮಾಡಿ ರಸ್ತೆಯನ್ನು ಹದ ಮಾಡಿ ಓಡಾಡಲು ಅನುಕೂಲವಾಗುವಂತೆ ಮಾಡಿಕೊಂಡಿದ್ದರು.
ಇತ್ತೀಚೆಗೆ ಕೆನಾಲ್ ದುರಸ್ತಿ ಮಾಡುವ ಸಲುವಾಗಿ ದೊಡ್ಡ ದೊಡ್ಡ ಜೆಸಿಬಿ, ಹಿಟಾಚಿ, ಲಾರಿಗಳು ಕೂಡ ಈ ಭಾಗದಲ್ಲಿ ಸಂಚಾರ ಮಾಡಿವೆ. ಹೀಗಾಗಿ ರಸ್ತೆ ಎಲ್ಲಾ ಸಂಪೂರ್ಣವಾಗಿ ಹಾಳಾಗಿದ್ದು, ಸಾರ್ವಜನಿಕರು ಓಡಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದ್ದಾರೆ ಅನಂತರಾಜು ಅಗ್ನಿವಂಶಿ.
ರಸ್ತೆಯ ಅಕ್ಕ ಪಕ್ಕದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಸಮಸ್ಯೆ ಇದ್ದು, ಇದನ್ನು ಗ್ರಾಮ ಪಂಚಾಯತಿ ಪಿಡಿಒ ಅವರ ಗಮನಕ್ಕೆ ತಂದಾಗ ಪೈಪ್ ಗಳನ್ನು ಅಳವಡಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟಿದ್ದರು. ಈಗ ಹೇಮಾವತಿ ಇಂಜಿನಿಯರ್ ಒಬ್ಬರು ಸ್ಥಳಕ್ಕೆ ಬಂದು ಪೈಪ್ ಗಳನ್ನು ತೆಗೆದು ಪಕ್ಕಕ್ಕೆ ಹಾಕಿಸಿದ್ದಾರೆ. ಪರ್ಯಾಯವಾಗಿ ನೀರು ಹರಿದು ಹೋಗುವುದಕ್ಕೆ ಯಾವುದೇ ವ್ಯವಸ್ಥೆಯನ್ನು ಕೂಡ ಮಾಡಿಲ್ಲ. ಇದರಿಂದಾಗಿ ನೀರು ಕೂಡ ರಸ್ತೆಯ ಮೇಲೆ ಹರಿಯುತ್ತಿದ್ದು ಸಂಪೂರ್ಣವಾಗಿ ಹಾಳಾಗಿದೆ.
ಈ ಭಾಗದ ಮನೆಗಳಲ್ಲಿ ವಯಸ್ಸಾದ ಹಿರಿಯರಿದ್ದಾರೆ. ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಇದ್ದಾರೆ. ಇವರ್ಯಾರು ಕೂಡ ತಮ್ಮ ತಮ್ಮ ಕೆಲಸಗಳಿಗೆ ಶಾಲಾ ಕಾಲೇಜುಗಳಿಗೆ ಹೋಗಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಾಲ್ಕು ಚಕ್ರದ ವಾಹನಗಳು ಈ ಭಾಗದಲ್ಲಿ ಚಲಿಸಲು ನೆಲ ಜಾರುತಿದೆ. ದ್ವಿಚಕ್ರ ವಾಹನವಂತೂ ಈ ಭಾಗದಲ್ಲಿ ಓಡಿಸಲು ಆಗುವುದೇ ಇಲ್ಲ ಒಂದು ವೇಳೆ ಹಾಗೂ ಚಲಾಯಿಸಿದರೆ ಬೀಳುವುದು ಗ್ಯಾರಂಟಿ.
ನಾನು ವಕೀಲನಾಗಿ ಪ್ರತಿನಿತ್ಯ ತುಮಕೂರಿಗೆ ಬರಬೇಕು ಆದರೆ ಬರುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ವಾರದಲ್ಲಿ ಮೂರು ದಿನ ನ್ಯಾಯಾಲಯಕ್ಕೆ ಗೈರು ಹಾಜರಾಗಿದ್ದೇನೆ. ತುಮಕೂರಿನಿಂದ 8 ಕಿಲೋಮೀಟರ್ ದೂರದಲ್ಲಿರುವ ಒಂದು ಗ್ರಾಮದ ಪರಿಸ್ಥಿತಿ ಹೀಗಾದರೆ ತುಮಕೂರು ಜಿಲ್ಲಾ ಕೇಂದ್ರದಿಂದ ದೂರದಲ್ಲಿ ಇರುವಂತಹ ಹಳ್ಳಿಗಳ ಸ್ಥಿತಿಗತಿ ಹೇಗಿರಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ತುಮಕೂರು ಜಿಲ್ಲಾಡಳಿತ ಆಗಬಹುದು, ಹೇಮಾವತಿ ಇಲಾಖೆಯ ಅಧಿಕಾರಿಗಳು ಆಗಬಹುದು, ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳೇ ಆಗಬಹುದು, ದಯವಿಟ್ಟು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನ ಆಲಿಸಿ ಸೂಕ್ತ ಪರಿಹಾರವನ್ನು ಮಾಡಿಕೊಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಈಗಾಗಲೇ ಕೂಡ ಹೇಮಾವತಿ ಇಲಾಖೆಯ ಅಧಿಕಾರಿಗಳ ಗಮನಕ್ಕೂ ಕೂಡ ತರಲಾಗಿದೆ. ಅದ್ಯಾಕೋ ಗೊತ್ತಿಲ್ಲ ತುಂಬಾ ಉದಾಸೀನ ತೋರುತ್ತಿದ್ದಾರೆ. ಯಾವುದೇ ಅಧಿಕಾರಿಗಳು. ಈ ಬಗ್ಗೆ ಕ್ರಮವನ್ನ ತೆಗೆದುಕೊಂಡಿಲ್ಲ. ಏಕಾಏಕಿ ಇಂಜಿನಿಯರ್ ಒಬ್ಬರು ಪೈಪ್ಗಳನ್ನ ತೆಗೆದುಹಾಕಿದ್ದಾರೆ. ಕನಿಷ್ಠ ಮಟ್ಟದ ಪರಿಜ್ಞಾನ ಇಟ್ಟುಕೊಂಡು ಕೆಲಸ ಮಾಡಬೇಕು. ಈ ರೀತಿಯಾಗಿ ನಡೆದುಕೊಂಡರೆ ಏನು ಪ್ರಯೋಜನ ಇದರಿಂದ ಸಾರ್ವಜನಿಕರಿಗೆ ಎಷ್ಟು ಅನಾನುಕೂಲ ಆಗುತ್ತದೆ ಎಂದು ಸ್ವಲ್ಪ ಏನಾದರೂ ಅರಿವು ಇವರಿಗೆ ಇದೆಯೇ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಆದಷ್ಟು ಬೇಗ ತುಮಕೂರಿನಿಂದ ಕೆಲವೇ ಕಿಲೋಮೀಟರ್ಗಳ ದೂರದಲ್ಲಿರುವ ಮತ್ತು ಹೇಮಾವತಿ ಕೆನಲ್ ಪಕ್ಕದ ಈ ರಸ್ತೆಯನ್ನು ದುರಸ್ತಿ ಮಾಡಿಕೊಡಬೇಕು ಎಂದು ಒತ್ತಾಯ ಮಾಡಿದ್ದಾರೆ.