ತುಮಕೂರು || ಕಿತ್ತರೆ ಬರುವ ಡಾಂಬರು : ಕಳಪೆ ಕಾಮಗಾರಿಗೆ ಹೊಣೆ ಯಾರು..?

ತಿಪಟೂರು : ರೈತರು ಗ್ರಾಮಾಂತರ ಪ್ರದೇಶಗಳಿಂದ ನಗರಕ್ಕೆ ತಾವು ಬೆಳೆದ ಸರಕು ಸರಂಜಾಮುಗಳನ್ನು ತಕ್ಷಣ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ನಿರ್ಮಿಸಿದಂತಹ ರಸ್ತೆಗಳು ಇಂದು ಕೇವಲ ಗುತ್ತಿಗೆದಾರರ ಮತ್ತು ಅಧಿಕಾರಿಗಳ ಜೇಬು ತುಂಬಿಸಲು ಮಾತ್ರ ಉಪಯೋಗವಾಗುತ್ತಿರುವುದು ವಿಪರ್ಯಾಸವಾಗಿದೆ.

ಕೇಂದ್ರ ಪ್ರಾಯೋಜಿತ ಯೋಜನೆ :

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್‍ವೈ) ಯು ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನದಲ್ಲಿದ್ದು, ಯೋಜನೆಯನ್ನು 2000 ನೇ ಇಸವಿ ಆಗಸ್ಟ್ 15 ರಂದು ಆರಂಭಿಸಲಾಯಿತು. ಇದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ನವೆಂಬರ್ 2015ರ ಸಮಯದಲ್ಲಿ 14 ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಅನುಸರಿಸಿ, ಕೇಂದ್ರ ಪ್ರಾಯೋಜಿತ ಯೋಜನೆಗಳ ತರ್ಕಬದ್ಧಗೊಳಿಸುವಿಕೆ ಕುರಿತು ಮುಖ್ಯಮಂತ್ರಿಗಳ ಉಪಗುಂಪು, ಈ ಯೋಜನೆಗೆ ಕೇಂದ್ರ ಸರ್ಕಾರ ಶೇ.60 ಮತ್ತು ರಾಜ್ಯಗಳು ಶೇ.40 ಧನಸಹಾಯ ನೀಡುವುದಾಗಿ ಘೋಷಿಸಲಾಯಿತು.

ಜನರಿಗೆ ಅನಾನುಕೂಲವಾದ ರಸ್ತೆಗಳು :

ಗ್ರಾಮೀಣ ಭಾರತದ ರಸ್ತೆಗಳ ನಿರ್ಮಾಣ-ನವೀಕರಣದೊಂದಿಗೆ ಗ್ರಾಮಗಳ ಜನರ ಜೀವನ ಶೈಲಿಯನ್ನು ಬದಲಾಯಿಸಲು ಈ ಯೋಜನೆ ಆರಂಭವಾಗಿತ್ತು. ರಸ್ತೆ ನಿರ್ಮಾಣದ ನಾಲ್ಕು ವರ್ಷಗಳ ನಂತರ, ಹೊಸ ಫೀಡರ್ ರಸ್ತೆಗಳ ಮುಖ್ಯ ಪರಿಣಾಮವೆಂದರೆ, ರೈತರ ಕೃಷಿ ಫಲಿತಾಂಶಗಳು, ಆದಾಯಗಳಲ್ಲಿ ಗಣನೀಯ ಬದಲಾವಣೆಯಾಗುವುದು. ಹಾಗೂ ಗ್ರಾಮ ಸಂಸ್ಥೆಗಳಲ್ಲಿ ಉದ್ಯೋಗವು ಸ್ವಲ್ಪಮಟ್ಟಿಗೆ ವಿಸ್ತರಿಸಿ ಉತ್ತಮ ಮಾರುಕಟ್ಟೆ ಸಂಪರ್ಕ ದೊರೆಯುತ್ತದೆ. ಆದರೇ ತಾಲ್ಲೂಕಿನಲ್ಲಿ ರಸ್ತೆಗಳು ಹೇಳುವವರು ಕೇಳುವವರು ಇಲ್ಲದೇ ಕಳಪೆ ಕಾಮಗಾರಿಗಳಿಂದ ಹಳ್ಳ ಹಿಡಿಯುತ್ತಿದ್ದು, ರೈತರಿಗೆ ಅನುಕೂವಾಗುವ ಬದಲು ಸಮಸ್ಯೆಯಾಗಿ ಪರಿಣಮಿಸಿವೆ.

ಅಧಿಕಾರಿ, ಗುತ್ತಿಗೆದಾರರ ಜೇಬು ತುಂಬುತ್ತಿದೆ :

ಯೋಜನೆಯ ರಸ್ತೆಗಳು ಈಗ ಕೇವಲ ಅಧಿಕಾರಗಳ ಮತ್ತು ಗುತ್ತಿಗೆದಾರರ ಜೇಬು ತುಂಬಿಸುವ ಖಜಾನೆಗಳಾಗಿವೆ. ಇದಕ್ಕೆ ಉದಾಹರಣೆ ಎಂಬಂತೆ ತಾಲ್ಲೂಕಿನ ಕಸವನಹಳ್ಳಿಯಿಂದ ಹುಲ್ಲೇನಹಳ್ಳಿ ಮಾರ್ಗದ ಎಂಡಿಆರ್ ರಸ್ತೆಗೆ ಸಂಪರ್ಕ ಕಲ್ಪಿಸುವ ಡಾಂಬಾರು ರಸ್ತೆ ಕಾಮಗಾರಿಯನ್ನು ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಜಿಓಐ ಪ್ಯಾಕೇಜ್ ಸಂಖ್ಯೆ : ಕೆಎನ್ 25-143 ಟೆಂಡರ್ ಸಂಖ್ಯೆ : ಕೆಎನ್ 25-25, ರಸ್ತೆಯ ಉದ್ದ : 5,373 ಕಿಮೀ, ಅಂದಾಜು ಮೊತ್ತ : 4,72,50,000 ಹಾಗೂ 5 ವರ್ಷಗಳ ನಂತರ ಮರು ಡಾಂಬರೀಕರಣದ ಮೊತ್ತ : 43.42 ಲಕ್ಷಗಳನ್ನು ಒಳಗೊಂಡ ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರ : ಮೆ|| ಕೆ.ಗೌಡ ಆ್ಯಂಡ್ ಕೋ, ಮೊದಲನೇ ದರ್ಜೆ ಗುತ್ತಿಗೆದಾರರು ಕಾಮಗಾರಿಯನ್ನು 2020ರ ಡಿಸೆಂಬರ್‍ನಲ್ಲಿ ಪ್ರಾರಂಭಿಸಿ ನವೆಂಬರ್ 8, 2021ರಂದು ನಿರ್ಮಿಸುವ ಅವಧಿಯ ಫಲಕವನ್ನು ಹಾಕಿರುತ್ತಾರೆ.

ಕಿತ್ತರೆ ಕೈ ಸಮೇತ ಬರುವ ರಸ್ತೆ :

ರಸ್ತೆ ನಿರ್ಮಾಣ ಕಾಮಗಾರಿ ಹೇಗಿದೆ ಎಂದರೇ ಒಬ್ಬ ಸಾಮಾನ್ಯ ವ್ಯಕ್ತಿ ಕೈನಿಂದ ರಸ್ತೆಗೆ ಹಾಕಿರುವ ಡಾಂಬಾರನ್ನು ಕಿತ್ತು ಗುಡ್ಡೆ ಹಾಕಬಹುದಾಗಿದೆ. ಕೆಲವು ಕಡೆ ಹಾಸಿಗೆಯ ರೀತಿಯಲ್ಲಿ ರಸ್ತೆಗಳನ್ನು ಸುತ್ತಬಹುದಾಗಿದ್ದು, ರಸ್ತೆಯ ಕಳಪೆ ಮಟ್ಟ ಎಷ್ಟರ ಮಟ್ಟಿಗೆ ಇದೆ ಎಂಬುದಕ್ಕೆ ಸೂಕ್ತ ನಿದರ್ಶನವಾಗಿದೆ. ಈ ರೀತಿಯ ಕಳಪೆ ದರ್ಜೆಯ ಡಾಂಬಾರು ರಸ್ತೆಯನ್ನು ನಾವು ಎಂದೂ ನೋಡಿರಲಿಲ್ಲವೆಂದು ಗ್ರಾಮದ ಜನರು ಆರೋಪಿಸಿದ್ದಾರೆ. ಇದೇ ರೀತಿ ತಾಲ್ಲೂಕಿನ ತಿಪಟೂರು-ತುರುವೇಕೆರೆ ರಸ್ತೆಯಲ್ಲಿ ಬರುವ ಕೈದಾಳ ಗೇಟ್‍ನಿಂದ ಚಿಗ್ಗಾವಿವರೆಗೆ ಡಾಂಬಾರು ರಸ್ತೆಯನ್ನು ಮಾಡಿದ್ದು, ಕೆಲವೇ ದಿನಗಳಲ್ಲಿ ರಸ್ತೆಯೇ ಸಂಪೂರ್ಣ ಹಾಳಾಗಿ ಹೋಗಿದೆ.


ತಾಲೂಕಿನಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಿರುವುದು ಸಂತೋಷದ ವಿಷಯ. ಆದರೆ ಆ ರಸ್ತೆಗಳು ಉತ್ತಮ ಗುಣಮಟ್ಟದಿಂದ ಕೂಡಿಲ್ಲದೇ ಕೇವಲ ಗುತ್ತಿಗೆದಾರರ ಜೇಬು ತುಂಬುತ್ತಿರುವುದು ವಿಪರ್ಯಾಸ.

-ಕಾಂತರಾಜು, ಸಾರ್ವಜನಿಕ

ತಿಪಟೂರು-ತುರುವೇಕೆರೆ ರಸ್ತೆಯಲ್ಲಿ ಬರುವ ಕೈದಾಳ ಗೇಟ್‍ನಿಂದ ಚಿಗ್ಗಾವಿವರೆಗಿನ ಡಾಂಬಾರು ರಸ್ತೆ ಕಳಪೆಯಿಂದ ಕೂಡಿದೆ ಎಂದು ನಾನು ಈ ಹಿಂದೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದೆ. ಆದರೇ ಈಗ ಇದಕ್ಕಿಂತಲೂ ಕಳಪೆ ಗುಣಮಟ್ಟದ ರಸ್ತೆಯನ್ನು ಕಸವನಹಳ್ಳಿಯಿಂದ ಹುಲ್ಲೇನಹಳ್ಳಿ ಮಾರ್ಗದ ಎಂಡಿಆರ್ ರಸ್ತೆಗೆ ಸಂಪರ್ಕ ಕಲ್ಪಸುವ ಡಾಂಬಾರು ರಸ್ತೆಯು ಕಾಮಗಾರಿಯಾದ ತಕ್ಷಣವೇ ಕೈನಿಂದ ಗುಡಿಸುವಷ್ಟರ ಮಟ್ಟಿಗೆ ಕಳಪೆ ಕಾಮಗಾರಿ ಮಾಡಿದ್ದು, ಕೂಡಲೇ ಶಾಸಕರು ಈ ಬಗ್ಗೆ ಗಮನ ಹರಿಸಿ ಸಾರ್ವಜನಿಕರ ತೆರಿಗೆ ಹಣ ಹಾಳಾಗದಂತೆ ನೋಡಿಕೊಳ್ಳಬೇಕು.

-ರಾಜಣ್ಣ, ಬಸ್ತಿಹಳ್ಳಿ ಗ್ರಾಮಸ್ಥರು


ಜನಪ್ರತಿನಿಧಿಗಳ ಮೌನ, ಜನರಲ್ಲಿ ಅನಮಾನ :

ತಾಲ್ಲೂಕಿನಲ್ಲಿ ಪಿಎಂಜಿಎಸ್‍ವೈ ಯೋಜನೆಯ ಬಹುತೇಕ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ಸಾಕಷ್ಟು ಕಳಪೆಯಿಂದ ಕೂಡಿದ್ದರೂ ಸಹ ಜನಪ್ರತಿನಿಧಿಗಳು ಇದರ ಬಗ್ಗೆ ಮಾತನಾಡುತ್ತಿಲ್ಲ. ಇದನ್ನು ಗಮನಿಸಿದರೆ ಗುತ್ತಿಗೆದಾರರಿಗೂ, ಇಂಜಿನಿಯರ್‍ಗೂ ಮತ್ತು ಶಾಸಕರಿಗೂ ಏನೋ ಒಳ ಒಪ್ಪಂದವಾಗಿರುವಂತೆ ಕಾಣುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಶಾಸಕರು ಖುದ್ದು ಎಲ್ಲಾ ರಸ್ತೆಗಳ ಗುಣಮಟ್ಟವನ್ನು ಪರೀಕ್ಷಿಸುತ್ತಿದ್ದರು, ಈಗ ಮತ್ತೆ ಆಯ್ಕೆಯಾಗಿರುವ ಶಾಸಕರು ಅವರೇನಾ ಎನ್ನುವಷ್ಟರ ಮಟ್ಟಿಗೆ ಅನುಮಾನ ಪ್ರಾರಂಭವಾಗಿದ್ದು, ಸಾರ್ವಜನಿಕರ ಹಣದಲ್ಲಿ ನಿರ್ಮಿಸುತ್ತಿರುವ ರಸ್ತೆಗಳು ಜನರ ಸಂಚಾರಕ್ಕೂ ಮೊದಲೇ ಕಿತ್ತು ಬರುತ್ತಿರುವುದರಿಂದ ಸಾರ್ವಜನಿಕರ ತೆರಿಗೆ ಹಣ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ ಎಂದು ಜನರು ಆರೋಪಿಸಿದ್ದಾರೆ.

ಅಸಡ್ಡೆ ಉತ್ತರ ನೀಡುವ ಎಇಇ :

ಪಿಎಂಜಿಎಸ್‍ವೈ ಯೋಜನೆಯ ಎಇಇ ತೇಜಮೂರ್ತಿ ಅವರು ನನಗೆ ಈ ಬಗ್ಗೆ ಮಾಹಿತಿ ಬಂದಿದ್ದು, ರಸ್ತೆಗಳನ್ನು ಮತ್ತೆ ಪರೀಕ್ಷಿಸಿ ಮರು ನಿರ್ಮಾಣ ಮಾಡುತ್ತೇವೆ ಎನ್ನುತ್ತಾರೆ. ಆದರೇ ಇವರ ಗಮನಕ್ಕೆ ಬಾರದೇ ಈ ರಸ್ತೆಗಳನ್ನು ನಿರ್ಮಿಸಿದ್ದಾರೆಯೆ? ಇಲ್ಲ ಯಾರು ಪ್ರಶ್ನಿಸದೆ ಹೋದರೇ ರಸ್ತೆಗಳನ್ನು ಹಾಗೆಯೆ ಬಿಟ್ಟು ಬಿಡೋಣವೆಂದು ಗುತ್ತಿಗೆದಾರರ ಜೊತೆ ಶಾಮಿಲಾಗಿ ಕಳಪೆ ರಸ್ತೆಯನ್ನು ಮಾಡುತ್ತಿದ್ದಾರೆಯೆ ಎಂಬುದು ತಿಳಿಯುತ್ತಿಲ್ಲ.

Pragati TV Social Connect for more latest u

Leave a Reply

Your email address will not be published. Required fields are marked *