ವಿಜಯನಗರ : ಮುನಿರಾಬಾದ್ನಲ್ಲಿರುವ ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ಗೇಟ್ ಚೈನ್ ಲಿಂಕ್ ಮುರಿದು ಹೋಗಿದೆ. ನದಿಗೆ ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಮೂಡಿಸಿದೆ. ಹೊಸ ಕ್ರಸ್ಟ್ಗೇಟ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು, 4 ದಿನದಲ್ಲಿ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸುವ ಯೋಜನೆ ರೂಪಿಸಲಾಗಿದೆ.
ಡ್ಯಾಂನಿಂದ ಇದುವರೆಗೂ 3 ಟಿಸಿಎಂಸಿ ಅಡಿ ನೀರು ನದಿಗೆ ಸೇರಿದೆ ಎಂದು ಅಂದಾಜಿಸಲಾಗಿದೆ.
ತುಂಗಭದ್ರಾ ಡ್ಯಾಂ 19ನೇ ಕ್ರಸ್ಟ್ಗೇಟ್ ಚೈನ್ ಲಿಂಕ್ ಮುರಿದ ಕುರಿತು ಪರಿಶೀಲನೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಮಧ್ಯಾಹ್ನ 12.30ಕ್ಕೆ ಡ್ಯಾಂಗೆ ಭೇಟಿ ನೀಡಲಿದ್ದಾರೆ. ಭಾನುವಾರ ಉಪ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಡ್ಯಾಂಗೆ ಭೇಟಿ ನೀಡಿ, ಪರಿಶೀಲಿಸಿ, ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ. ಇಲಾಖೆ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.
ಹೊಸಪೇಟೆಯಲ್ಲೇ ಹೊಸ ಗೇಟ್ ತಯಾರಿ: ಡ್ಯಾಂನ ಹೊಸ ಕ್ರಸ್ಟ್ಗೇಟ್ ನಿರ್ಮಾಣ ಕಾರ್ಯ ಈಗಾಗಲೇ ನಡೆಯುತ್ತಿದೆ. ಈ ಕುರಿತು ಡಿ. ಕೆ. ಶಿವಕುಮಾರ್ ಫೋಟೋ ಹಂಚಿಕೊಂಡಿದ್ದಾರೆ. ವಿಜಯನಗರ ಜಿಲ್ಲೆಯ ಜಿಲ್ಲಾ ಕೇಂದ್ರವಾದ ಹೊಸಪೇಟೆಯಲ್ಲಿಯೇ ಹೊಸ ಗೇಟ್ ತಯಾರಾಗುತ್ತಿದೆ. ತಜ್ಞರು, ಅಧಿಕಾರಿಗಳ ತಂಡ ಉಸ್ತುವಾರಿ ನೋಡಿಕೊಳ್ಳುತ್ತಿದೆ.
ಹೊಸಪೇಟೆಯ ನಾರಾಯಣ ಇಂಜಿನಿಯರ್ಸ್ನಲ್ಲಿ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ನಿರ್ಮಾಣ ನಡೆಯುತ್ತಿದೆ. ಡಿ. ಕೆ. ಶಿವಕುಮಾರ್ ಸಹ ಸ್ಥಳಕ್ಕೆ ಭೇಟಿ ನೀಡಿ ತಯಾರಿ ಕಾರ್ಯದ ಪ್ರಗತಿ ಪರಿಶೀಲನೆ ನಡೆಸಿದ್ದಾರೆ. ಗೇಟ್ ನಿರ್ಮಾಣ ಕಾರ್ಯ ಕ್ಷಿಪ್ರಗತಿಯಲ್ಲಿ ನಡೆಯುತ್ತಿದ್ದು, ಸದ್ಯದಲ್ಲೇ ಅಳವಡಿಕೆ ಕಾರ್ಯ ಪೂರ್ಣಗೊಳ್ಳಲಿದೆ.
ಕಳೆದ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಆಗಿದೆ. ರೈತರ ಬೆಳೆ ಉಳಿಸುವುದು ನಮ್ಮ ಮುಖ್ಯ ಆದ್ಯತೆಯಾಗಿದೆ. ಬೇರೆ ಜಲಾಶಯಗಳಲ್ಲಿ ಕ್ರಸ್ಟ್ ಗೇಟ್ಗೆ 2 ರೀತಿಯ ಸುರಕ್ಷತೆಗೆ ಇರುತ್ತದೆ. ತುಂಗಭದ್ರಾದಲ್ಲಿ ಗೇಟ್ಗೆ ಒಂದೇ ಚೈನ್ ಇದ್ದ ಕಾರಣ ಅದು ಮುರಿದು ಬಿದ್ದಿದೆ. ಹೆಚ್ಚಿನ ಕಾರ್ಮಿಕರನ್ನು ನಿಯೋಜಿಸಿ ತ್ವರಿತವಾಗಿ ಕಾಮಗಾರಿ ಮುಗಿಸಲಾಗುವುದು ಎಂದು ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.