ಜೈಪುರ: ಜೈಪುರ-ದೆಹಲಿ ಹೆದ್ದಾರಿಯಲ್ಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ ಹೈಟೆನ್ಷನ್ ವಿದ್ಯುತ್ ತಂತಿಗೆ ತಗುಲಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಸುಮಾರು 12ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ನಗರದ ಮನೋಹರ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಟೋಡಿ ಗ್ರಾಮದಲ್ಲಿರುವ ಇಟ್ಟಿಗೆ ಗೂಡಿಗೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಗ್ರಾಮದ ಕಚ್ಚಾ ರಸ್ತೆಯ ಮೂಲಕ ಬಸ್ ಹೋಗುತ್ತಿತ್ತು.
ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ ನಂತರ ಬಸ್ಗೆ ಬೆಂಕಿ ಹೊತ್ತಿಕೊಂಡಿತ್ತು, ನಂತರ ಅದನ್ನು ನಂದಿಸಲಾಯಿತು ಎಂದು ಜೈಪುರ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ ರಾಶಿ ಡೋಗ್ರಾ ದುಡಿ ತಿಳಿಸಿದ್ದಾರೆ.
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ, ದಾರಿಹೋಕರು ಮತ್ತು ಸ್ಥಳೀಯರು ಸಹಾಯಕ್ಕೆ ಧಾವಿಸಿದ್ದರು, ಅಗ್ನಿಶಾಮಕ ದಳದವರು ಸ್ಥಳಕ್ಕೆ ತಲುಪುವ ಮೊದಲೇ ಹಲವಾರು ಪ್ರಯಾಣಿಕರನ್ನು ಹೊರತೆಗೆದರು. ಗಾಯಾಳುಗಳನ್ನು ನಂತರ ಶಹಪುರ ಉಪ-ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ಸ್ಲೀಪರ್ ಬಸ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 20 ಮಂದಿ ಸಾವನ್ನಪ್ಪಿದ್ದರು.
For More Updates Join our WhatsApp Group :
