ಬಿಡದಿ ರೈಲ್ವೆ ನಿಲ್ದಾಣಕ್ಕೆ ಕೇಂದ್ರ ಸಚಿವ v ಸೋಮಣ್ಣ ದಿಢೀರ್ ಭೇಟಿ

ಬಿಡದಿ ರೈಲ್ವೆ ನಿಲ್ದಾಣಕ್ಕೆ ಕೇಂದ್ರ ಸಚಿವ v ಸೋಮಣ್ಣ ದಿಢೀರ್ ಭೇಟಿ

ಬಿಡದಿ ರೈಲ್ವೆ ನಿಲ್ದಾಣದಲ್ಲಿ ವಿ. ಸೋಮಣ್ಣ ಪರಿಶೀಲನೆ.

ಬೆಂಗಳೂರು : ಮಾಗಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಿಡದಿ ರೈಲ್ವೆ ನಿಲ್ದಾಣಕ್ಕೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿಲ್ದಾಣದ ಮೂಲಸೌಕರ್ಯ, ಪ್ರಯಾಣಿಕರ ಸೌಲಭ್ಯಗಳು ಹಾಗೂ ಸುತ್ತಮುತ್ತಲಿನ ಸಂಚಾರ ವ್ಯವಸ್ಥೆಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಗತ್ಯ ಸಲಹೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ, ಪರಮಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಹುಟ್ಟೂರು ಬಾನಂದೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬಿಡದಿ–ಬಾನಂದೂರು ರಸ್ತೆಗೆ ಮೇಲ್ಸೇತುವೆ ನಿರ್ಮಿಸುವ ಕುರಿತು ಸಚಿವರಿಗೆ ಮನವಿ ಸಲ್ಲಿಸಲಾಯಿತು. ರೈಲ್ವೆ ಹಳಿ ದಾಟುವ ಸಂದರ್ಭದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಅಪಾಯ ಹಾಗೂ ಸಂಚಾರ ಅಡಚಣೆಗಳನ್ನು ಮನಗಂಡು, ಮೇಲ್ಸೇತುವೆ ನಿರ್ಮಾಣ ಅಗತ್ಯವಿದೆ ಎಂದು ವಿವರಿಸಲಾಯಿತು. ಜೊತೆಗೆ ಹೆಜ್ಜಾಲ ಪ್ರದೇಶದಲ್ಲೂ ಮೇಲ್ಸೇತುವೆ ನಿರ್ಮಾಣಕ್ಕೆ ಬೇಡಿಕೆ ಇಡಲಾಯಿತು.

ಇದಲ್ಲದೆ, ಕೇಂದ್ರ ರಾಜ್ಯ ಖಾತೆ ಜಲಸಂಪನ್ಮೂಲ ಇಲಾಖೆ ಸಚಿವರಾಗಿರುವ ವಿ. ಸೋಮಣ್ಣ ಅವರಿಗೆ ಮಾಗಡಿ ತಾಲ್ಲೂಕಿಗೆ ಹೇಮಾವತಿ ನೀರು ತುಂಬಿಸುವ ಯೋಜನೆಯ ಪ್ರಾಯೋಗಿಕ ಹಂತ ಯಶಸ್ವಿಯಾಗಿರುವ ವಿಷಯವನ್ನು ತಿಳಿಸಲಾಯಿತು. ಈ ಯೋಜನೆಯಿಂದ ತಾಲ್ಲೂಕಿನ ನೀರಾವರಿ ಮತ್ತು ಕುಡಿಯುವ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುವ ನಿರೀಕ್ಷೆ ವ್ಯಕ್ತಪಡಿಸಲಾಯಿತು.

ಹೇಮಾವತಿ ನೀರು ಯೋಜನೆಯ ಮುಂದುವರಿದ ಹಂತದ ಜೊತೆಗೆ, ಮಾಗಡಿ ತಾಲ್ಲೂಕಿನ ಕೆರೆಗಳ ಪುನಶ್ಚೇತನ ಕಾಮಗಾರಿಗಳಿಗೆ ತಮ್ಮ ಇಲಾಖೆಯ ಮೂಲಕ ಅನುದಾನ ಬಿಡುಗಡೆ ಮಾಡುವಂತೆ ಸಚಿವರಿಗೆ ಮನವಿ ಮಾಡಲಾಯಿತು. ಕೆರೆಗಳ ಪುನಶ್ಚೇತನದಿಂದ ಭೂಗರ್ಭ ಜಲಮಟ್ಟ ಹೆಚ್ಚಳವಾಗುವ ಜೊತೆಗೆ ರೈತರಿಗೂ ಹೆಚ್ಚಿನ ಅನುಕೂಲವಾಗಲಿದೆ ಎಂಬುದನ್ನು ಮನವರಿಕೆ ಮಾಡಲಾಯಿತು.

ಈ ಎಲ್ಲಾ ಮನವಿಗಳಿಗೆ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಮಾಗಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಅಗತ್ಯ ಸಹಕಾರ ದೊರೆಯಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *