ಅತಂತ್ರವಾದ ಅಂತರಸನಹಳ್ಳಿ ಮಾರುಕಟ್ಟೆ : ವರ್ತಕರ ನಡೆಗೆ ರೋಸಿ ಹೋದ ಗ್ರಾಹಕ..!

ತುಮಕೂರು : ತುಮಕೂರಿನ ಅಂತರಸನಹಳ್ಳಿ ಮಾರುಕಟ್ಟೆ ಅಕ್ಷರಶಃ ಕಿಷ್ಕಿಂದೆಯಾಗಿದೆ. ಪ್ರತಿನಿತ್ಯ ಟ್ರಾಫಿಕ್ ಜಾಮ್ ನಿಂದ ಗ್ರಾಹಕರು ತತ್ತರಿಸಿಹೋಗಿದ್ದಾರೆ. ರಸ್ತೆಯನ್ನೇ ನುಂಗಿದ ವರ್ತಕರಿಗೆ ತಕ್ಕ ಪಾಠ ಕಲಿಸದೇ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಎಲೆಕ್ಸನ್ ಟೈಂ ಲ್ಲಿ ಯಾರಿಗೂ ಟಚ್ ಮಾಡ್ಬೇಡಿ ಅಂತಿದ್ದಾರಂತೆ ರಾಜಕಾರಣಿಗಳು.

ಹೌದು,, ತುಮಕೂರಿನ ಅಂತರಸನಹಳ್ಳಿಯ ಎಪಿಎಂಸಿ ಮಾರುಕಟ್ಟೆ ಇಡೀ ಜಿಲ್ಲೆಯ ವ್ಯಾಪಾರ ವಹಿವಾಟಿನ ಕೇಂದ್ರ ಸ್ಥಾನವಾಗಿದೆ. ವಾರಕ್ಕೆ ಸರಿಸುಮಾರು 5 ಲಕ್ಷ ಗ್ರಾಹಕರು ಇಲ್ಲಿ ಬಂದು ಹೋಗುತ್ತಾರೆ. ವಾರಕ್ಕೆ ಕನಿಷ್ಠ 50 ಕೋಟಿ ರೂ ಗೂ ಹೆಚ್ಚು ವಹಿವಾಟು ನಡೆಯುತ್ತದೆ. ಅಂತಹ ಮಾರುಕಟ್ಟೆಯಲ್ಲಿ ಗ್ರಾಹಕರು ಓಡಾಡಲು… ವಾಹನ ಸಂಚರಿಸಲು ಜಾಗವೇ ಇಲ್ಲದಂತಾಗಿದೆ.

ಸುಮಾರು 80 ಅಡಿ ಅಗಲದ ರಸ್ತೆ ಇದ್ದರೂ ಸುಗಮ ಸಂಚಾರಕ್ಕೆ ತೊಡಕಾಗಿದೆ. 80 ಅಡಿಯಲ್ಲಿ ಸುಮಾರು 60 ಅಡಿಯಷ್ಟು ರಸ್ತೆಯನ್ನು ವರ್ತಕರೇ ಒತ್ತುವರಿಮಾಡಿಕೊಂಡಿದ್ದಾರೆ. ಉಳಿದ 20 ಅಡಿ ರಸ್ತೆಯಲ್ಲಷ್ಟೇ ಸಾರ್ವಜನಿಕರು ಓಡಾಡುವಂತಾಗಿದೆ. ಈ ಮಾರುಕಟ್ಟೆಯಲ್ಲಿ ಒಮ್ಮೆ ಗ್ರಾಹಕ ಪ್ರವೇಶಿಸಿದರೆ ದಿನಸಿಯೋ, ತರಕಾರಿಯನ್ನೋ ಖರಿದಿಸಿ ವಾಪಸ್ ಹೊರಗೆ ಬರಲು ಸರಿಸುಮಾರು 1 ತಾಸು ಸಮಯ ಬೇಕಾಗುತ್ತದೆ. ಅಷ್ಟರ ಮಟ್ಟಿಗೆ ಟ್ರಾಫಿಕ್ ಜಾಮ್ ಕಿರಿಕಿರಿ ಗ್ರಾಹಕರನ್ನು ಬಾಧಿಸಿದೆ.

ಎಪಿಎಂಸಿ ಮಾರುಕಟ್ಟೆ  8 ಎಕರೆ ಪ್ರದೇಶದಲ್ಲಿ ಇದೆ. ಒಟ್ಟು 222 ಅಂಗಡಿ ಮಳಿಗೆಗಳಿಗೆ. ಅದರಂತೆ 200 ಬೀದಿ ಬದಿಯ ವ್ಯಾಪಾರಿಗಳು ಇದ್ದಾರೆ. ಆದರೆ ಸಮಸ್ಯೆ ಆಗಿರೋದು ಅಂಗಡಿ ಮಳಿಗೆಗಳ ವರ್ತಕರಿಂದ. ತಮಗೆ  ಬಾಡಿಗೆ ನೀಡಿದ ವ್ಯಾಪ್ತಿ ಬಿಟ್ಟು ಅರ್ಧ ರಸ್ತೆವರೆಗೂ ಶೀಟೌ ಹಾಕಿ ವಿಸ್ತರಿಸಿಕೊಂಡು ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ವರ್ತಕರ ಈ ದರ್ಪದಿಂದ ಗ್ರಾಹಕರ ಓಡಾಟಕ್ಕೆ ತೊಂದರೆಯಾಗುತ್ತಿದೆ. ವಾಹನಗಳ ನಡುವೆ ಡಿಕ್ಕಿ ಸಂಭವಿಸಿವೆ. ಪ್ರತಿನಿತ್ಯ ವಾಹನದಿಂದ ಬಿದ್ದು ದ್ವಿಚಕ್ರವಾಹನ ಸವಾರರು ಗಾಯಗೊಳ್ಳುತಿದ್ದಾರೆ.

ಕೆಲ ರಾಜಕಾರಣಿಗಳ ಹಿಂಬಾಲಕರೇ ಅಂಗಡಿ ಮಳಿಗೆ ಬಾಡಿಗೆ ಪಡೆದಿದ್ದು ದರ್ಪದಿಂದ ಮೆರೆಯುತಿದ್ದಾರೆ. ಕೃಷಿ ಮಾರಾಟ ಮಂಡಳಿ ಸದಸ್ಯ ಉಮೇಶ್ ಗೌಡ ವರ್ತಕರ ಈ ನಡೆಗೆ ಒಮ್ಮೆ ಬ್ರೇಕ್ ಹಾಕಿದ್ರು. ಒತ್ತುವರಿಮಾಡಿಕೊಂಡ ಸ್ಥಳವನ್ನು ತೆರವುಗೊಳಿಸಿದ್ರು. ಆದರೂ ರಾಜಕೀಯ ಒತ್ತಡದಿಂದ ಮತ್ತೆ ಹಳೇ ಚಾಳಿ ಮುಂದುವರೆಸಿದ್ದಾರೆ.

ಅಂಗಡಿ ಬಾಡಿಗೆ ಪಡೆದ  ರಾಜಕೀಯ ವ್ಯಕ್ತಿಗಳ ಹಿಂಬಾಲಕರು ಬೇರೊಬ್ಬರಿಗೆ ಅಕ್ರಮವಾಗಿ ಒಳ ಬಾಡಿಗೆಗೆ ಕೊಟ್ಟಿದ್ದಾರೆ. ಇನ್ನೊಂದೆಡೆ ಮಾರುಕಟ್ಟೆಯಲ್ಲಿ ಶುಚಿತ್ವವೂ ಮಾಯವಾಗಿದೆ. ರಾಜಕಾರಣಿಗಳ ವೋಟ್ ಬ್ಯಾಂಕ್ ರಾಜಕಾರಣ ಹಾಗೂ ಅಧಿಕಾರಿಗಳ ಜಾಣ ಮೌನದಿಂದ ಅಂತರಸನಹಳ್ಳಿ ಮಾರುಕಟ್ಟೆ ಅತಂತ್ರವಾಗಿ ಉಳಿದಿದೆ.

Pragati TV Social Connect for more latest u

Leave a Reply

Your email address will not be published. Required fields are marked *