ರಾಜೇಶ್ವರಿ ಸುವೆ ಎಂ ಮತ್ತು ಆಕಾಶ್ ಧುಲ್ ಟಾಪ್–3ರಲ್ಲಿ ಸ್ಥಾನ.
ಕೇಂದ್ರ ಲೋಕಸೇವಾ ಆಯೋಗವು 2025ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದ್ದು, ದೇಶದಾದ್ಯಂತ ಕುತೂಹಲಕ್ಕೆ ತೆರೆ ಎಳೆದಿದೆ. ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ ಅನುಜ್ ಅಗ್ನಿಹೋತ್ರಿ ಅವರು ಮೊದಲ ಸ್ಥಾನ ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಮಿಂಚಿದ್ದಾರೆ. ಅವರ ಬೆನ್ನಲ್ಲೇ ರಾಜೇಶ್ವರಿ ಸುವೆ ಎಂ ಮತ್ತು ಆಕಾಶ್ ಧುಲ್ ಕ್ರಮವಾಗಿ ಎರಡು ಮತ್ತು ಮೂರನೇ ರ್ಯಾಂಕ್ ಗಳಿಸಿದ್ದಾರೆ.
ಕಳೆದ ವರ್ಷದ ಮೇ 25 ರಂದು ಪೂರ್ವಭಾವಿ ಪರೀಕ್ಷೆ ಆರಂಭವಾಗಿತ್ತು. ನಂತರ ಆಗಸ್ಟ್ 22 ರಿಂದ 31 ರವರೆಗೆ ನಡೆದ ಕಠಿಣ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ 2,736 ಅಭ್ಯರ್ಥಿಗಳನ್ನು ಅಂತಿಮ ಸಂದರ್ಶನಕ್ಕೆ ಆಹ್ವಾನಿಸಲಾಗಿತ್ತು. ಬಳಿಕ ಜನವರಿ 5 ರಿಂದ ಫೆಬ್ರವರಿ 27 ರವರೆಗೆ ನಡೆದ ಪರೀಕ್ಷೆಯು ಅಭ್ಯರ್ಥಿಗಳ ತಾಳ್ಮೆ ಮತ್ತು ಜ್ಞಾನಕ್ಕೆ ಒಡ್ಡಿದ ಅಂತಿಮ ಸವಾಲಾಗಿತ್ತು. ಇದೀಗ ಪ್ರಕಟವಾಗಿರುವ ಫಲಿತಾಂಶದ ಅನ್ವಯ, ಒಟ್ಟು 958 ಅಭ್ಯರ್ಥಿಗಳು ವಿವಿಧ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ.
ನೇಮಕಾತಿಯ ವಿವರಗಳನ್ನು ನೋಡುವುದಾದರೆ, ಒಟ್ಟು 180 ಅಭ್ಯರ್ಥಿಗಳು ಭಾರತೀಯ ಆಡಳಿತ ಸೇವೆಗೆ (IAS) ಆಯ್ಕೆಯಾಗಿದ್ದು, 150 ಅಭ್ಯರ್ಥಿಗಳು ಭಾರತೀಯ ಪೊಲೀಸ್ ಸೇವೆಗೆ (IPS) ಮತ್ತು 55 ಅಭ್ಯರ್ಥಿಗಳು ಭಾರತೀಯ ವಿದೇಶಾಂಗ ಸೇವೆಗೆ (IFS) ನಿಯೋಜನೆಗೊಂಡಿದ್ದಾರೆ. ವಿಶೇಷವಾಗಿ 180 ಐಎಎಸ್ ಹುದ್ದೆಗಳಲ್ಲಿ 74 ಸಾಮಾನ್ಯ ವರ್ಗಕ್ಕೆ, 47 ಒಬಿಸಿ, 28 ಪರಿಶಿಷ್ಟ ಜಾತಿ, 13 ಪರಿಶಿಷ್ಟ ಪಂಗಡ ಮತ್ತು 18 ಅಭ್ಯರ್ಥಿಗಳು ಇಡಬ್ಲ್ಯೂಎಸ್ ವರ್ಗದಡಿ ಸ್ಥಾನ ಪಡೆದಿದ್ದಾರೆ. ಈ ಫಲಿತಾಂಶದ ಅಧಿಕೃತ ಅಂಕಪಟ್ಟಿಗಳು ಮುಂದಿನ 15 ದಿನಗಳಲ್ಲಿ ಯುಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಲಭ್ಯವಿರಲಿವೆ.
For More Updates Join our WhatsApp Group :



