ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮದಲ್ಲಿ 18 ನಕಲಿ ಖಾತೆಗಳಿಗೆ ವರ್ಗಾವಣೆಯಾಗಿದ್ದ 94.73 ಕೋಟಿ ರೂ. ಹಣವನ್ನು ಆರೋಪಿಗಳು ನಂತರ ಬಾರ್, ವೈನ್ ಶಾಪ್, ಚಿನ್ನದ ಮಳಿಗೆಗಳು ಹಾಗೂ ಸಣ್ಣಸಣ್ಣ ಕಂಪನಿಗಳ ಖಾತೆಗಳಿಗೆ ವರ್ಗಾಯಿಸಿಕೊಂಡು ನಗದು ರೂಪದಲ್ಲಿ ಪಡೆದಿರುವುದು ಎಸ್ಐಟಿ ತನಿಖೆಯಲ್ಲಿ ಬಹಿರಂಗವಾಗಿದೆ.
ಪ್ರಕರಣದಲ್ಲಿ ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ನಕಲಿ ಖಾತೆಗಳನ್ನು ತೆರೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸತ್ಯನಾರಾಯಣ ವರ್ಮಾ ಮತ್ತು ಚಂದ್ರಮೋಹನ್ ಎಂಬಾತನನ್ನು ಬಂಧಿಸಿದ್ದ ಎಸ್ಐಟಿ, ವಿಚಾರಣೆಗೊಳಪಡಿಸಿದಾಗ ಈ ವಿಚಾರ ಬಯಲಾಗಿದೆ. ಆರೋಪಿಗಳು ತೆರೆದಿದ್ದ 18 ನಕಲಿ ಖಾತೆಗಳಿಗೆ ವರ್ಗಾವಣೆಯಾಗಿದ್ದ ನಿಗಮದ ಹಣವನ್ನು ಹೈದರಾಬಾದ್ ಮತ್ತು ಬೆಂಗಳೂರಿನ ವೈನ್ ಶಾಪ್‌ಗಳು, ಬಾರ್‌ಗಳು, ಚಿನ್ನಾಭರಣ ಮಾರಾಟ ಮಳಿಗೆಗಳು ಹಾಗೂ ಸಣ್ಣ ಕಂಪನಿಗಳು ಸೇರಿದಂತೆ ನೂರಕ್ಕೂ ಅಧಿಕ ಖಾತೆಗಳಿಗೆ ವರ್ಗಾಯಿಸಿಕೊಂಡು ಬಳಿಕ ನಗದು ರೂಪದಲ್ಲಿ ಪಡೆದಿರುವುದು ತಿಳಿದು ಬಂದಿದೆ.
ಇನ್ನು ಸತ್ಯನಾರಾಯಣ ವರ್ಮಾಗೆ ಸಂಬಂಧಿಸಿದ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ ಎಸ್ಐಟಿ, ಆತನ ಸಂಬಂಧಿಯೊಬ್ಬರ ಮನೆಯಲ್ಲಿ 4 ಸೂಟ್ ಕೇಸ್ನಲ್ಲಿ ತುಂಬಿರಿಸಲಾಗಿದ್ದ 8.21 ಕೋಟಿ ರೂ. ಹಣ, ಆತನ ಐಷಾರಾಮಿ ಲ್ಯಾಂಬೋರ್ಗಿನಿ ಕಾರನ್ನು ಜಪ್ತಿ ಮಾಡಿದ್ದಾರೆ. ಒಟ್ಟಾರೆ ಇದುವರೆಗೂ 11.83 ಕೋಟಿ ರೂ. ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು