ವಾಲ್ಮೀಕಿ ನಿಗಮ ಹಗರಣ : ಮಾಜಿ ಸಚಿವ ನಾಗೇಂದ್ರಗೆ ನ್ಯಾಯಾಂಗ ಬಂಧನ ವಿಸ್ತರಣೆ

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಆಗಸ್ಟ್ 3ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ನಾಗೇಂದ್ರ ಅವರನ್ನು ಇಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನಾಗೇಂದ್ರ ಅವರನ್ನು ಕಸ್ಟಡಿಗೆ ಕೇಳಿದ ಇಡಿ ಅಧಿಕಾರಿಗಳು, ಇದೇ ವೇಳೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಸತ್ಯನಾರಾಯಣ ವರ್ಮಾ ಅವರನ್ನೂ ಸಹ ಕಸ್ಟಡಿಗೆ ಕೇಳಿ ಮನವಿ ಸಲ್ಲಿಸಿದ್ದಾರೆ.

ಹೃದಯ ಸಂಬಂಧಿ ಖಾಯಿಲೆಯಿರುವುದರಿಂದ ವೈದ್ಯಕೀಯ ಸಹಾಯ ಬೇಕು ಎಂದು ನಾಗೇಂದ್ರ ಪರ ವಕೀಲ ಶ್ಯಾಮ್ ಸುಂದರ್ ಮನವಿ ಸಲ್ಲಿಸಿದರು. ನ್ಯಾಯಾಂಗ ಬಂಧನದಲ್ಲಿ ಸಹಜವಾಗಿ ವೈದ್ಯಕೀಯ ನೆರವು ಸಿಗಲಿದೆ ಎಂದು ನ್ಯಾಯಾಧೀಶರು ತಿಳಿಸಿದರು. ಇದೇ ವೇಳೆ ನಾಗೇಂದ್ರ ಅವರಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸುವುದಾಗಿ ವಕೀಲರಾದ ಶ್ಯಾಮ್ ಸುಂದರ್ ನ್ಯಾಯಾಲಯಕ್ಕೆ ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 12ರಂದು ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಾಗೇಂದ್ರ ಅವರನ್ನು ಜುಲೈ 18ರ ವರೆಗೆ ಇಡಿ ಕಸ್ಟಡಿಗೆ ಒಪ್ಪಿಸಿತ್ತು. ನಂತರ ಇಡಿ ಅಧಿಕಾರಿಗಳ ಮನವಿಯ ಮೇರೆಗೆ ಜುಲೈ 22ರ ವರೆಗೆ ಕಸ್ಟಡಿ ಅವಧಿಯನ್ನು ವಿಸ್ತರಿಸಿತ್ತು.

Leave a Reply

Your email address will not be published. Required fields are marked *