ಬೆಂಗಳೂರು: ಭೋಜನ ವಿರಾಮದ ಬಳಿಕ ಪುನಾರಂಭವಾದ ವಿಧಾನಸಭೆ ಕಲಾಪದಲ್ಲಿ ಪ್ರತಿಪಕ್ಷಗಳು ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಹಣ ವರ್ಗಾವಣೆ ವಿಚಾರ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿದರು. ಪ್ರತಿಪಕ್ಷ ನಾಯಕ ಆರ್.ಅಶೋಕ್, ವಾಲ್ಮೀಕಿ ಹಗರಣದಲ್ಲಿ ನೂರಾರು ಕೋಟಿ ಲೂಟಿಯಾಗಿದೆ. ಚರ್ಚೆಗೆ ಅವಕಾಶ ಮಾಡಕೊಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಸದನದಲ್ಲಿ ಪ್ರತಿಪಕ್ಷ ಸದಸ್ಯರು ಹಾಗೂ ಆಡಳಿತ ಪಕ್ಷ ಸದಸ್ಯರಿಂದ ಗದ್ದಲ ಉಂಟಾಯಿತು.
ಈ ವೇಳೆ ಎದ್ದುನಿಂತ ಸಿಎಂ ಸಿದ್ದರಾಮಯ್ಯ, ನಾವು ಎಲ್ಲ ಚರ್ಚೆಗೆ ಸಿದ್ಧರಿದ್ದೇವೆ. ನಿಯಮಾವಳಿ ಪ್ರಕಾರ ಚರ್ಚೆ ಮಾಡಬೇಕು. ಎಲ್ಲ ಚರ್ಚೆಗೂ ನಮ್ಮ ಸರ್ಕಾರ ಉತ್ತರ ಕೊಡಲು ಸಿದ್ಧವಿದೆ. ಬಿಜೆಪಿಗೆ ಹಗರಣದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಇವರ ಕಾಲದಲ್ಲಿ ಅದೆಷ್ಟು ಲೂಟಿ ಹೊಡೆದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಸೇರಿ ಎಲ್ಲಾ ಹಗರಣಗಳ ವಿಚಾರವಾಗಿ ಚರ್ಚೆ ಮಾಡಲು ಸಿದ್ಧರಿದ್ದೇವೆ. ಈ ಪ್ರಕರಣ ಸಂಬಂಧ ಕಾನೂನು ರೀತಿಯಲ್ಲಿ ಚರ್ಚೆಗೆ ಅವಕಾಶ ಇಲ್ಲ. ಏಕೆಂದರೆ ತನಿಖೆ ಇನ್ನೂ ಪೂರ್ಣವಾಗಿಲ್ಲ. ಆದರೂ ರಾಜ್ಯದ ಜನರಿಗೆ ಮಾಹಿತಿ ನೀಡುವ ಕಾರಣಕ್ಕೆ ಚರ್ಚೆಗೆ ನಾವು ಸಿದ್ಧ. ಆದರೆ ಪ್ರಶ್ನೋತ್ತರ ಅವಧಿ ಬಳಿಕ ಚರ್ಚೆ ಮಾಡೋಣ ಎಂದು ತಿಳಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಬಸನಗೌಡ ಯತ್ನಾಳ್, ಅಡ್ಜಸ್ಟ್‌ಮೆಂಟ್ ಬೇಕಿಲ್ಲ, ನಮ್ಮ ಪಕ್ಷವೂ ಸ್ವಚ್ಛ ಆಗಬೇಕು. ನಿಮ್ಮ ಪಕ್ಷವೂ ಸ್ವಚ್ಛ ಆಗಬೇಕು ಎಂದರು. ಯತ್ನಾಳ್ಗೆ ಟಾಂಗ್ ಕೊಟ್ಟ ಸಿಎಂ, ನಿಮಗೆ ಸೀರಿಯಸ್ ನೆಸ್ ಇಲ್ಲ. ಯತ್ನಾಳ್, ಏನು ಮಾತಾಡ್ತೀರಿ, ಯಾವಾಗ ಯಾವ ನಿಲುವು ತಗೋತೀರಿ ಅಂತ ನಿಮಗೇ ಗೊತ್ತಿರಲ್ಲ. ನಿಮ್ಮ ಪಕ್ಷದಲ್ಲಿ ಸಿಎಂ ಆಗೋದಿಕ್ಕೆ ಎರಡೂವರೆ ಸಾವಿರ ಕೋಟಿ ಕೊಡಬೇಕು ಅಂದಿದ್ರಿ. ಆಮೇಲೆ ಅದರಿಂದ ಹಿಂದಕ್ಕೆ ಸರಿದಿರಿ ಎಂದು ಆಕ್ಷೇಪಿಸಿದರು.