ಆನ್‌ಲೈನ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ ಅಪರಾಧವಲ್ಲ : ಆದೇಶ ಹಿಂಪಡೆದ ಹೈಕೋರ್ಟ್‌

ಬೆಂಗಳೂರು: ಆನ್‌ಲೈನ್‌ನಲ್ಲಿ ಮಕ್ಕಳ ಅಶ್ಲೀಲ ವಿಡಿಯೊ/ಚಿತ್ರ ವೀಕ್ಷಿಸಿದ ವ್ಯಕ್ತಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 67ಬಿ ಅಡಿ ಪ್ರಕರಣ ದಾಖಲಿಸಲಾಗದು ಎಂದು ಜುಲೈ 10ರಂದು ಮಾಡಿದ್ದ ತನ್ನ ಆದೇಶವನ್ನು ಹೈಕೋರ್ಟ್‌ ಶುಕ್ರವಾರ ಹಿಂಪಡೆದಿದೆ.

ಐಟಿ ಕಾಯಿದೆಯ ಸೆಕ್ಷನ್‌ 67ಬಿ (ಬಿ) ಅನ್ನು ಪರಿಗಣಿಸದೆ ಆದೇಶ ಮಾಡಲಾಗಿದ್ದು, ಇದು ತಪ್ಪಾಗಿದೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಈ ಹಿಂದೆ ನೀಡಿದ್ದ ತನ್ನದೇ ಆದೇಶವನ್ನು ಹಿಂಪಡೆದಿದೆ.

ಅಶ್ಲೀಲ ವೆಬ್‌ಸೈಟ್‌ ವೀಕ್ಷಿಸುವುದು ಮಾಹಿತಿ ಪ್ರಸಾರ ಅಥವಾ ವರ್ಗಾವಣೆ ಮಾಡಿದಂತಾಗುವುದಿಲ್ಲ ಎಂದು ನ್ಯಾಯಾಲಯವು ಅರ್ಜಿದಾರ ಇನಾಯುತುಲ್ಲಾ ಎನ್‌ ವಿರುದ್ಧ ಪ್ರಕರಣ ರದ್ದುಪಡಿಸಿತ್ತು. ಐಟಿ ಕಾಯಿದೆ ಅಡಿ ಸೆಕ್ಷನ್‌ 67ಬಿ ಅಡಿ ಅಪರಾಧವಾಗಬೇಕಾದರೆ ಮಾಹಿತಿ ಪ್ರಸಾರ ಅಥವಾ ವರ್ಗಾವಣೆ ಮಾಡಬೇಕು ಎಂದು ಹೇಳಲಾಗಿದೆ.

ಆದೇಶ ಹಿಂಪಡೆಯುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೆಮೊ ವಿಚಾರಣೆ ನಡೆಸಿದ ನ್ಯಾ. ನಾಗಪ್ರಸನ್ನ ಅವರು ಐಟಿ ಕಾಯಿದೆ ಸೆಕ್ಷನ್‌ 67ಬಿ (ಎ) ಆಧರಿಸಿ ಆದೇಶ ಮಾಡಲಾಗಿತ್ತು. ಅದಾಗ್ಯೂ, ಕಾಯಿದೆಯ ಸೆಕ್ಷನ್‌ 67ಬಿ (ಬಿ) ಅಡಿ ವಿದ್ಯುನ್ಮಾನ ಮಾದರಿಯಲ್ಲಿ ಮಕ್ಕಳನ್ನು ಅಶ್ಲೀಲ, ಲೈಂಗಿಕವಾಗಿ ಬಿಂಬಿಸುವ ಟೆಕ್ಸ್ಟ್‌ ಅಥವಾ ಡಿಜಿಟಲ್‌ ಇಮೇಜ್‌ಗಳನ್ನು ಕಳುಹಿಸುವುದು, ಕೇಳುವುದು, ಅದನ್ನು ಬ್ರೌಸ್‌ ಮಾಡುವುದು, ಡೌನ್‌ಲೋಡ್‌, ಜಾಹೀರಾತು, ಪ್ರಮೋಟ್‌, ಹಂಚಿಕೆ ಮಾಡುವುದು ಸೆಕ್ಷನ್‌ 67ಬಿ ಅಡಿ ಪ್ರಕ್ರಿಯೆಗೆ ನಾಂದಿ ಹಾಡಲಿದೆ ಎಂದಿದೆ.

Leave a Reply

Your email address will not be published. Required fields are marked *