ವಿಜಯಪುರ: ಅಂಗನವಾಡಿಗೆ ತೆರಳಲು ರಸ್ತೆ ದಾಟುವ ವೇಳೆ ಖಾಸಗಿ ಶಾಲಾ ಬಸ್ ಹರಿದು 5 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಅರಳದಿನ್ನಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ.
ಆಲಮಟ್ಟಿ ಜಲಾಶಯದ ಕೆಳಪಾತ್ರದ ಕೂಗಳತೆ ದೂರದಲ್ಲಿರುವ ಅರಳದಿನ್ನಿ ಗ್ರಾಮದ ಬಸವರಾಜ (5) ಮೃತ ಬಾಲಕ. ಅಂಗನವಾಡಿಗೆ ಹೊರಟಾಗ ಬಾಲಕನ ಮೇಲೆ ಖಾಸಗಿ ಶಾಲಾ ಬಸ್ ಹರಿದಿದ್ದು, ಸ್ಥಳದಲ್ಲೇ ಮೃತನಾಗಿದ್ದಾನೆ. ಘಟನೆಯಲ್ಲಿ ಪುಟ್ಟ ಮಗನ ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಘಟನೆಯಿಂದ ಗ್ರಾಮದಲ್ಲಿ ಶೋಕ ಆವರಿಸಿದೆ. ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಚಾಲಕ ಲೈಸೆನ್ಸ್ ಹೊಂದಿರುವ ಬಗ್ಗೆ ಪರಿಶೀಲಿಸಬೇಕು. ಇಂತಹ ಘಟನೆಗಳು ಮರುಕಳಿಸಬಾರದು. ನುರಿತ ವಾಹನ ಚಾಲಕರನ್ನು ಶಾಲೆಯವರು ನೇಮಿಸಿಕೊಳ್ಳಬೇಕು. ಬಾಲಕನ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡಿ, ನ್ಯಾಯ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಈ ಬಗ್ಗೆ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.