ಕಲಬುರಗಿ:ಕಲಬುರಗಿ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಅತಿ ಭಾರೀ ಮಳೆಗೆ ಭೀಮಾ ಮತ್ತು ಕಾಗಿಣಾ ನದಿಗಳು ಉಕ್ಕಿ ಹರಿಯುತ್ತಿವೆ. ಇದರ ಪರಿಣಾಮ ಜಿಲ್ಲೆಯಲ್ಲಿ ಹಲವಾರು ಗ್ರಾಮಗಳು ಜಲಾವೃತಗೊಂಡಿದ್ದು, ಮಹಿಳೆಯರು, ಮಕ್ಕಳೊಂದಿಗೆ ಮನೆಯ ಮೇಲ್ಚಾವಣಿಯಲ್ಲೇ ಬದುಕಿಗಾಗಿ ಹೋರಾಟ ನಡೆಸುವಂತಹ ಭೀತಿದಾಯಕ ದೃಶ್ಯಗಳು ಗೋಚರಿಸುತ್ತಿವೆ.
“ಮಕ್ಕಳೊಂದಿಗೆ ಮೇಲ್ಚಾವಣಿಯಲ್ಲಿ ಜೀವ ಉಳಿಸುವ ಸಂಕಷ್ಟ!”
ಸಮಖೇಡ ತಾಂಡಾದ ಶೋಭಾ ಎಂಬ ಬಾಣಂತಿ ತನ್ನ ಒಂದು ತಿಂಗಳ ಹಸೂಗೂಸನ್ನು ಕಂಕುಳಲ್ಲಿ ಇಟ್ಟು ಮನೆಯ ಮೇಲ್ಚಾವಣಿಗೆ ಏರಿ ಕುಳಿತುಕೊಂಡಿದ್ದಾಳೆ. ಜಲಾವೃತ ಮನೆಗಳಿಂದ ಪರಾರಿಯಾಗುವ ಅವಕಾಶವಿಲ್ಲದೆ, ವಾತಾವರಣ ಹತಾಶೆಯ ತೀವ್ರತೆ ತಲುಪಿದೆ.
“ಯಾರೂ ನಮ್ಮ ಮಾತು ಕೇಳುವುದಿಲ್ಲ, ಅಧಿಕಾರಿಗಳ ಸಹಾಯ ಸಿಕ್ಕಿಲ್ಲ”
– ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು
ಆಡಳಿತ ಯಂತ್ರ ಫೇಲೋ? – ಹೆದ್ದಾರಿ ತಡೆದು ಪ್ರತಿಭಟನೆ
ಗ್ರಾಮದ ತಾಂಡಾ ನಿವಾಸಿಗಳು ಶಾಸಕರು ಬರಲೇ ಇಲ್ಲ ಎಂದು ಆರೋಪಿಸಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ನಂತರ, ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಸ್ಥಳಕ್ಕೆ ಆಗಮಿಸಿ ಮನವೊಲಿಸಿದರು.
42 ಗೋವುಗಳಿಗೆ ದುರಂತ ಅಂತ್ಯ – ಗೋಶಾಲೆ ನದಿಗೆ ಕೊಚ್ಚು!
ಚಿಂಚೋಳಿ ತಾಲೂಕಿನ ಜಟ್ಟೂರಿನಲ್ಲಿ, ಕಾಗಿಣಾ ನದಿಯ ಪ್ರವಾಹಕ್ಕೆ ಗೋಶಾಲೆಯೇ ನದಿಗೆ ಕೊಚ್ಚಿಕೊಂಡು ಹೋಗಿದ್ದು, 42 ಗೋವುಗಳು ಸಾವಿಗೀಡಾದ ಭೀಕರ ಘಟನೆ ವರದಿಯಾಗಿದೆ.
ಭೀಮಾ ನದಿಯ ಅಬ್ಬರಕ್ಕೆ ಸೇತುವೆ ನಶ್ಟ – ಬೆಳೆ ಸಂಪೂರ್ಣ ನಾಶ
ಕಲ್ಲೂರ (ಕೆ) – ಚಿನ್ಮಳ್ಳಿ ಗ್ರಾಮಗಳ ಮಧ್ಯೆ ಇರುವ ಸೇತುವೆಯ ಒಂದು ಭಾಗ ಭೀಮಾ ನದಿಗೆ ಕೊಚ್ಚಿಕೊಂಡು ಹೋಗಿದೆ. ಇದರ ಪರಿಣಾಮ ನೂರಾರು ಎಕರೆಯ ಬೆಳೆಗಳು ನಾಶವಾಗಿ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಮಾಹೂರ ಗ್ರಾಮಸ್ಥರ ಸ್ಥಗಿತ ನಿರ್ಧಾರ – ಬೋಟ್ ಮೂಲಕ ರೆಸ್ಕ್ಯೂ
ಜೇವರ್ಗಿ ತಾಲೂಕಿನ ಮಾಹೂರ ಗ್ರಾಮದಲ್ಲಿ ನದಿಯ ನೀರು ಸುತ್ತುವರಿದ ಹಿನ್ನೆಲೆಯಲ್ಲಿ, ಗ್ರಾಮಸ್ಥರು “ಪರಿಹಾರ ಸಿಗುವವರೆಗೂ ನಾವು ಗ್ರಾಮ ಬಿಟ್ಟು ಹೋಗುವುದಿಲ್ಲ” ಎಂದು ಪಟ್ಟು ಹಿಡಿದರು. ಶಾಸಕ ಡಾ. ಅಜಯ್ ಸಿಂಗ್ ಶಾಶ್ವತ ಪರಿಹಾರದ ಭರವಸೆ ನೀಡಿದ ಬಳಿಕ, ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್ ಮೂಲಕ ಸ್ಥಳಾಂತರ ಮಾಡಿದೆ.
ಮಳೆ ಇನ್ನೂ ಮುಂದುವರಿಯಲಿದೆ – ಹವಾಮಾನ ಇಲಾಖೆ ಎಚ್ಚರಿಕೆ!
ಮುನ್ಸೂಚನೆಯ ಪ್ರಕಾರ, ಜಿಲ್ಲೆಯಲ್ಲಿ ಮುಂದಿನ ಇನ್ನೆರಡು ದಿನಗಳ ಕಾಲ ಭಾರಿ ಮಳೆಯ ಮುನ್ಸೂಚನೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಧಿಕಾರಿಗೆ ತಕ್ಷಣ ಸ್ಥಳಕ್ಕೆ ತೆರಳಲು ಸೂಚಿಸಿದ್ದಾರೆ.
For More Updates Join our WhatsApp Group :
