ಜಿರಿಬಾಬ್: ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಶನಿವಾರ ಮತ್ತೆ ನಡೆದ ಹಿಂಸಾಚಾರದಲ್ಲಿ ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಂದೆಡೆ ಬಿಷ್ಣುಪುರದಲ್ಲಿ ದಂಗೆಕೋರರು ರಾಕೆಟ್ ದಾಳಿ ನಡೆಸಿ ಒಬ್ಬ ವ್ಯಕ್ತಿಯನ್ನು ಕೊಂದ ನಂತರ ಭದ್ರತಾ ಪಡೆಗಳು ಶುಕ್ರವಾರ ಚುರಾಚಂದ್‌ಪುರ ಜಿಲ್ಲೆಯಲ್ಲಿ ಉಗ್ರರ ಮೂರು ಬಂಕರ್‌ಗಳನ್ನು ಧ್ವಂಸಗೊಳಿಸಿದ್ದಾರೆ.
ಶನಿವಾರ ಜಿರಿಬಾಮ್ ಜಿಲ್ಲೆಯಲ್ಲಿ ಎರಡು ಸಮುದಾಯಗಳ ಜನರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಒಬ್ಬ ವ್ಯಕ್ತಿಯನ್ನು ಮಲಗಿದ್ದಾಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ ಸುಮಾರು 5. ಕಿ. ಮೀ ದೂರದಲ್ಲಿ ಪ್ರತ್ಯೇಕ ಸ್ಥಳದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯ ಮನೆಗೆ ತೆರಳಿದ ಉಗ್ರರು ನಿದ್ದೆಯಲ್ಲಿ ಮಲಗಿದ್ದವನ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.
ಹತ್ಯೆಯ ನಂತರ ಜಿಲ್ಲಾಡಳಿತದ ಕೇಂದ್ರ ಕಚೇರಿಯಿಂದ 7 ಕಿಮೀ ದೂರದಲ್ಲಿರುವ ಬೆಟ್ಟಗಳಲ್ಲಿ ಕಾದಾಡುತ್ತಿರುವ ಸಮುದಾಯಗಳ ಜನರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಇದರಿಂದಾಗಿ ಮೂವರು ಉಗ್ರರು ಸೇರಿದಂತೆ ನಾಲ್ವರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವಾರದ ಆರಂಭದಲ್ಲಿ ಬೋರೋಬೆಕ್ರಾ ಪೊಲೀಸ್ ಠಾಣಾ ಪ್ರದೇಶದ ಜಕುರಾಧೋರ್‌ನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮೂರು ಕೋಣೆಗಳ ಮನೆಯನ್ನು ಶಂಕಿತ ‘ಗ್ರಾಮ ಸ್ವಯಂಸೇವಕರು’ ಸುಟ್ಟುಹಾಕಿದ ನಂತರ ಜಿರಿಬಾಮ್ ಜಿಲ್ಲೆಯಲ್ಲಿ ಮತ್ತೆ ಅಗ್ನಿಸ್ಪರ್ಶದಂತಹ ಘಟನೆ ನಡೆದಿತ್ತು. ಕಳೆದ ವರ್ಷ ಮೇ ತಿಂಗಳಿನಿಂದ ಇಂಫಾಲ್ ಕಣಿವೆ ಮೂಲದ ಮೈಟೈಸ್ ಮತ್ತು ಪಕ್ಕದ ಬೆಟ್ಟಗಳ ಮೂಲದ ಕುಕಿ-ಜೋ ಗುಂಪುಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.