ಹಿರಿಯ ನಟ ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮಗೊಳಿಸಲಾಗಿದೆ. ಇದು ವಿಷ್ಣುವರ್ಧನ್ ಅಭಿಮಾನಿಗಳಿಗೆ ತೀವ್ರ ಆಕ್ರೋಶ ತಂದಿದೆ. ಆದರೆ ಅಭಿಮಾನಿಗಳು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ವಿಷ್ಣು ಸಮಾಧಿ ಧ್ವಂಸದ ಬಗ್ಗೆ ಕೆಲ ಸಿನಿಮಾ ಸೆಲೆಬ್ರಿಟಿಗಳು ಮಾತನಾಡಿದ್ದು, ಇದೀಗ ನಟ ಧ್ರುವ ಸರ್ಜಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಅಭಿಮಾನಿ ಸ್ಟುಡಿಯೋನಲ್ಲಿದ್ದ ವಿಷ್ಣುವರ್ಧನ್ ಸಮಾಧಿಯನ್ನು ನೆಲಸಮ ಮಾಡಿದ್ದಾರೆ. ಈ ಘಟನೆಯನ್ನು ವಿಷ್ಣುವರ್ಧನ್ ಅಭಿಮಾನಿಗಳು ತೀವ್ರವಾಗಿ ಖಂಡಿಸಿದ್ದು ಪ್ರತಿಭಟನೆ ಸಹ ನಡೆದಿವೆ. ಆದರೆ ಮೊದಲಿನಿಂದಲೂ ವಿಷ್ಣುವರ್ಧನ್ ಸಮಾಧಿ ವಿವಾದದಲ್ಲಿಯೇ ಇದೆ. ಇದೀಗ ನ್ಯಾಯಾಲಯದ ಒಪ್ಪಿಗೆ ಮೇರೆಗೆ ಬಾಲಣ್ಣ ಕುಟುಂಬದವರು ವಿಷ್ಣುವರ್ಧನ್ ಸಮಾಧಿಯನ್ನು ನೆಲಸಮಗೊಳಿಸಿದ್ದಾರೆ. ಈ ವಿಷಾಧನೀಯ ಘಟನೆ ಕುರಿತಂತೆ ನಟ ಧ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ಸಾಧಕನಿಗೂ ಸಾವಿಲ್ಲ, ಕಲೆಗೂ ಸಾವಿಲ್ಲ. ವಿಷ್ಣು ಅಪ್ಪಾಜಿ ಸದಾ ಅಜರಾಮರ. ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ಗುಡಿ ಕಟ್ಟಿರುವ ವ್ಯಕ್ತಿಗೆ ಸ್ಮಾರಕ ಏಕೆ ಬೇಕು? ಆದರೂ ಸಹ ಈ ನಾಡಿನಲ್ಲಿ ಇಂಥಹಾ ಒಬ್ಬ ಕಲಾವಿದನಿಗೆ ಹೀಗೆ ಆಗಿದ್ದು ಖಂಡಿತ ಮನಸ್ಸಿಗೆ ನೋವುಂಟು ಮಾಡಿದೆ. ಕೇಳಲು ಸಾಕಷ್ಟು ಪ್ರಶ್ನೆಗಳಿವೆ. ಆದರೆ ಇದಕ್ಕೆಲ್ಲ ಉತ್ತರ, ನಾನು ಒಬ್ಬ ಕನ್ನಡಿಗನಾಗಿ, ಒಬ್ಬ ಕಲಾವಿದನಾಗಿ, ಈ ಒಂದು ಸಂದರ್ಭದಲ್ಲಿ ನಾನು ವಿಷ್ಣುವರ್ಧನ್ ಅವರ ಅಭಿಮಾನಿಗಳ ಜೊತೆಗೆ ನಿಂತಿದ್ದೇನೆ. ನಿಮ್ಮ ಮುಂದಿನ ನಡೆಗಾಗಿ ಕಾಯುತ್ತಿದ್ದೇನೆ’ ಎಂದು ಧ್ರುವ ಸರ್ಜಾ ಸಂದೇಶ ಹಂಚಿಕೊಂಡಿದ್ದಾರೆ.
ವಿಷ್ಣುವರ್ಧನ್ ಅವರ ಜೊತೆಗೆ ಅರ್ಜುನ್ ಸರ್ಜಾ ಮತ್ತು ಚಿರಂಜೀವಿ ಸರ್ಜಾ ಅವರು ಒಟ್ಟಿಗೆ ನಿಂತಿರುವ ಚಿತ್ರವೊಂದನ್ನು ಧ್ರುವ ಸರ್ಜಾ ಹಂಚಿಕೊಂಡಿದ್ದಾರೆ. ವಿಷ್ಣುವರ್ಧನ್ ಅವರ ಅಭಿಮಾನಿಗಳು ಮುಂದೆ ಯಾವ ಹೆಜ್ಜೆ ಇಡಲಿದ್ದಾರೆಯೋ ಅದಕ್ಕೆ ತಮ್ಮ ಬೆಂಬಲ ಇದೆಯೆಂದು ಧ್ರುವ ಸರ್ಜಾ ಹೇಳಿದ್ದಾರೆ. ಆ ಮೂಲಕ ವಿಷ್ಣುವರ್ಧನ್ ಅಭಿಮಾನಿಗಳಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಈ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಲಯ ಸ್ಪಷ್ಟ ತೀರ್ಪು ನೀಡಿದ್ದು, ಅಭಿಮಾನ್ ಸ್ಟುಡಿಯೋ ಬಹುತೇಕ ಕೈಜಾರಿ ಹೋಗಿದ್ದಾಗಿದೆ.
For More Updates Join our WhatsApp Group :