ಬ್ಲಾಕ್ ಕಾಫಿ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂಬುದು ತಿಳಿದ ವಿಚಾರ. ಕೆಲವರು ಪ್ರತಿನಿತ್ಯ ಇದನ್ನು ಸೇವನೆ ಮಾಡುತ್ತಾರೆ. ಪೌಷ್ಟಿಕ ತಜ್ಞರು ಕೂಡ ಇದು ನಮ್ಮ ದೇಹಕ್ಕೆ ಬಹಳ ಒಳ್ಳೆಯದು ಎಂದು ಹೇಳುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ನಡೆದ ಅಧ್ಯಯನ ಪ್ರಕಾರ, ಪ್ರತಿದಿನ ಬ್ಲಾಕ್ ಕಾಫಿ ಕುಡಿಯುವುದರಿಂದ ಜನರ ಜೀವಿತಾವಧಿ ಹೆಚ್ಚಾಗುತ್ತದೆ ಎಂಬುದು ಕಂಡು ಬಂದಿದೆ. ನೀವು ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಬಯಸುವುದಾದರೆ ಬ್ಲಾಕ್ ಕಾಫಿ ಕುಡಿಯುವುದಕ್ಕೆ ಪ್ರಾರಂಭಿಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಬ್ಲಾಕ್ ಕಾಫಿಯನ್ನು ಸಕ್ಕರೆ ಮತ್ತು ಹಾಲು ಬೆರೆಸದೆಯೇ ಕುಡಿಯಬೇಕು. ಆಗ ಮಾತ್ರ ನಿಮಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳು ಸಿಗಲು ಸಾಧ್ಯ. ಹಾಗಾದರೆ ಬ್ಲಾಕ್ ಕಾಫಿ ಸೇವನೆಯಿಂದ ಸಿಗುವ ಪ್ರಯೋಜನಗಳೇನು? ಯಾಕೆ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.
ಯಕೃತ್ತಿನ ಕೊಬ್ಬು ಕಡಿಮೆಯಾಗುತ್ತೆ
ತಜ್ಞರ ಪ್ರಕಾರ, ಬ್ಲಾಕ್ ಕಾಫಿ ಕುಡಿಯುವುದರಿಂದ ಯಕೃತ್ತಿನ ಕೊಬ್ಬು ಕಡಿಮೆಯಾಗುತ್ತದೆ. ಇದು ಯಕೃತ್ತಿನ ಕಾರ್ಯವನ್ನು ಸುಧಾರಿಸುತ್ತದೆ. ಮಾತ್ರವಲ್ಲ ನರಮಂಡಲವನ್ನು ಸಹ ಉತ್ತೇಜಿಸುತ್ತದೆ. ಜೊತೆಗೆ ಸಕ್ಕರೆ ಇಲ್ಲದ ಕಾಫಿ ಅಡ್ರಿನಾಲಿನ್ ಅನ್ನು ಬಿಡುಗಡೆ ಮಾಡುತ್ತದೆ, ಇದು ನಿಮ್ಮನ್ನು ದೈಹಿಕವಾಗಿ ಸಕ್ರಿಯರನ್ನಾಗಿ ಮಾಡುತ್ತದೆ.
ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ
ಬ್ಲಾಕ್ ಕಾಫಿಯಲ್ಲಿ ಕ್ಯಾಲೊರಿ ಕಡಿಮೆ ಇರುವುದರಿಂದ ಇದು ಚಯಾಪಚಯ ಕ್ರಿಯೆಯನ್ನೂ ಹೆಚ್ಚಿಸುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಅತ್ಯುತ್ತಮ ಔಷಧ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ತೂಕ ಕಡಿಮೆ ಮಾಡಿಕೊಳ್ಳಬೇಕೆಂಬ ಆಸೆ ಇದ್ದರೆ ಪ್ರತಿನಿತ್ಯ ತಪ್ಪದೆ ಬ್ಲಾಕ್ ಕಾಫಿ ಸೇವನೆ ಮಾಡಿ.
ಆಯಸ್ಸು ಹೆಚ್ಚುತ್ತದೆ
ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸಕ್ಕರೆ ಅಥವಾ ಹಾಲು ಬೆರಸದೆಯೇ ಬ್ಲಾಕ್ ಕಾಫಿ ಕುಡಿಯುವುದರಿಂದ ಸಾವಿನ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಬಹಿರಂಗಪಡಿಸಿದೆ. ಅಂದರೆ ಈ ಅಧ್ಯಯನದ ಪ್ರಕಾರ, ನಿಯಮಿತವಾಗಿ ಬ್ಲಾಕ್ ಕಾಫಿ ಕುಡಿಯುವುದರಿಂದ ನಿಮ್ಮ ಜೀವಿತಾವಧಿ ಹೆಚ್ಚಾಗುತ್ತದೆ ಎಂಬುದನ್ನು ತಿಳಿಸಿದೆ.
ಹೃದಯ ಸಂಬಂಧಿ ಕಾಯಿಲೆ ಬರುವ ಅಪಾಯ ಕಡಿಮೆ
ಪ್ರತಿದಿನ 1 ರಿಂದ 2 ಕಪ್ ಕೆಫೀನ್ ಇರುವ ಕಾಫಿ ಕುಡಿಯುವವರಿಗೆ ಹೃದಯ ಸಂಬಂಧಿ ಕಾಯಿಲೆಗಳು ಬರುವ ಅಪಾಯ ಕಡಿಮೆ ಇರುತ್ತದೆ. ಇದರರ್ಥ ಬ್ಲಾಕ್ ಕಾಫಿ ನಿಮ್ಮ ಹೃದಯವನ್ನು ಆರೋಗ್ಯವಾಗಿಡಲು ಮತ್ತು ನಿಮ್ಮ ದೀರ್ಘಾಯುಷ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಎಷ್ಟು ಕಪ್ ಕಾಫಿ ಒಳ್ಳೆಯದು?
ಕಾಫಿಯಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕಗಳು ಮತ್ತು ಜೈವಿಕ ಸಕ್ರಿಯ ಸಂಯುಕ್ತಗಳು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಅವು ಜೀವಕೋಶಗಳನ್ನು ಹಾನಿಯಿಂದ ರಕ್ಷಿಸುತ್ತವೆ. ಕೆಲವು ರೀತಿಯ ಕ್ಯಾನ್ಸರ್ ಮತ್ತು ಮಧುಮೇಹದಂತಹ ಕಾಯಿಲೆಗಳನ್ನು ತಡೆಗಟ್ಟುವಲ್ಲಿಯೂ ಅವು ಸಹಾಯ ಮಾಡುತ್ತವೆ. ಅದಕ್ಕಾಗಿಯೇ ತಜ್ಞರು ದಿನಕ್ಕೆ 1 ರಿಂದ 2 ಕಪ್ ಕಾಫಿ ಕುಡಿಯುವ ಅಭ್ಯಾಸವನ್ನು ಪಡೆಯಲು ಶಿಫಾರಸು ಮಾಡುತ್ತಾರೆ.
For More Updates Join our WhatsApp Group :