ಸುದೀಪ್ ಮಾತಿನ ಬಗ್ಗೆ ಎದ್ದ ಗೊಂದಲ.
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ‘ಮಾರ್ಕ್’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮ ನಡೆಯಿತು. ಅಲ್ಲಿ ಕಿಚ್ಚ ಸುದೀಪ್ ನೀಡಿದ ಹೇಳಿಕೆಯಿಂದ ದರ್ಶನ್ಅಭಿಮಾನಿಗಳು ಗರಂ ಆಗಿದ್ದಾರೆ. ಆದ್ರೆ ಸುದೀಪ್ ಅವರ ಮಾತಿನ ಉದ್ದೇಶ ಮತ್ತು ಹಿನ್ನೆಲೆ ಏನು ಎಂಬುದನ್ನು ಅವರ ಆಪ್ತ ರಾಜು ಗೌಡ ವಿವರಿಸಿದ್ದಾರೆ. ‘ನಾನು ಮತ್ತು ಸುದೀಪ್ ಅವರು ಜೊತೆಯಲ್ಲಿ ಇದ್ದಾಗ ಅವರಿಗೆ ಒಂದು ಫೋನ್ ಕರೆ ಬಂದಿತ್ತು. ಈ ಬಾರಿ ನಿಮ್ಮ ವಿರುದ್ಧ ಭಾರಿ ಪ್ರಬಲವಾಗಿ ಪೈರಸಿ ಸಂಚು ನಡೆದಿದೆ. ಆದಷ್ಟು ನೀವು ನಿಮ್ಮ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿ ಅಂತ ಆ ಫೋನ್ ಕರೆಯಲ್ಲಿ ಹೇಳಲಾಯಿತು. ಸುದೀಪ್ ಅವರ ಅಭಿಮಾನಿಗಳ ಹೆಸರಲ್ಲಿ ನಕಲಿ ಸಂಘಗಳನ್ನು ಸೃಷ್ಟಿ ಮಾಡಿಕೊಂಡು ಏನೇನೋ ಹಾಕುತ್ತಿದ್ದಾರೆ. ಆ ವಿಚಾರವನ್ನೇ ಸುದೀಪ್ ಅವರು ವೇದಿಕೆಯಲ್ಲಿ ಮಾತನಾಡಿದ್ದು’ ಎಂದು ರಾಜು ಗೌಡ ಅವರು ಹೇಳಿದ್ದಾರೆ.
‘ನಾವೆಲ್ಲರೂ ಯುದ್ಧಕ್ಕೆ ಸಿದ್ಧ ಅಂತ ಸುದೀಪ್ ಅವರು ಹೇಳಿದ್ದು ಯಾವುದೇ ಒಬ್ಬ ಸ್ಟಾರ್ ನಟರ ವಿರುದ್ಧವಾಗಿ ಅಲ್ಲ. ಯಾವುದೇ ಒಂದು ಸಿನಿಮಾ ಬಗ್ಗೆಯೂ ಅವರು ಹೇಳಿಕೆ ನೀಡಿಲ್ಲ. ಅವರು ಹೇಳಿದ್ದೇ ಬೇರೆ. ಇಲ್ಲಿ ಆಗುತ್ತಿರುವ ಚರ್ಚೆಯೇ ಬೇರೆ. ಪೈರಸಿ ವಿರುದ್ಧ ನಮ್ಮ ಹೋರಾಟ. ನಕಲಿ ಫ್ಯಾನ್ಸ್ ಸಂಘಗಳಿಂದ ಆಗುತ್ತಿರುವ ಅಪಪ್ರಚಾರ ಸರಿ ಅಲ್ಲ ಅಂತ ಸುದೀಪ್ ಹೇಳಿದ್ದು’ ಎಂದಿದ್ದಾರೆ ರಾಜು ಗೌಡ.
‘ದರ್ಶನ್ ವಿರುದ್ಧವಾಗಿ ಸುದೀಪ್ ಅವರು ಹೇಳಿಕೆ ನೀಡಿಲ್ಲ. ಆ ರೀತಿಯ ಸಂದರ್ಭ ಕೂಡ ಇಲ್ಲ. ಯಾರಿಗೆ ತಟ್ಟಬೇಕೋ ತಟ್ಟುತ್ತೆ ಅಂತ ಸುದೀಪ್ ಅವರು ಹೇಳಿದ್ದು ಪೈರಸಿಯವರಿಗೆ. ಪೈಲ್ವಾನ್ ಸಿನಿಮಾ ಬಂದಾಗ ಪೈರಸಿ ಎಷ್ಟು ಕಾಟ ಕೊಟ್ಟಿತ್ತು ಎಂಬುದು ನಿಮ್ಮೆಲ್ಲರಿಗೂ ಗೊತ್ತು. ನಿರ್ಮಾಪಕರು ಕಣ್ಣೀರು ಹಾಕುವಂತಹ ಪರಿಸ್ಥಿತಿ ಬಂದಿತ್ತು. ಅಂದು ಪೈರಸಿ ಮಾಡಿದವರಿಗೆ ಒಂದು ಗತಿ ಕಾಣಿಸಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಪೈರಸಿ ವಿರುದ್ಧ ಸೈಲೆಂಟ್ ಆಗಿ ಇರಬಾರದು, ಕಾನೂನಿನ ಹೋರಾಟ ಮಾಡಬೇಕು ಎಂಬುದು ಸುದೀಪ್ ಅವರ ಮಾತಿನ ಅರ್ಥ’ ಎಂದು ರಾಜು ಗೌಡ ಅವರು ಹೇಳಿದ್ದಾರೆ.
For More Updates Join our WhatsApp Group :




