4.48 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ ಕರ್ನಾಟಕ; ದೇಶದ ಅತಿದೊಡ್ಡ ಬಜೆಟ್ ರಾಜ್ಯಗಳಲ್ಲಿ ನಾಲ್ಕನೇ ಸ್ಥಾನ
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 4.48 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಮಂಡಿಸಿದ್ದಾರೆ. ದೇಶದ ಅತಿದೊಡ್ಡ ಬಜೆಟ್ ಮಂಡಿಸಿರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕವೂ ಇದೆ. ಬಜೆಟ್ ಗಾತ್ರ 4 ಲಕ್ಷ ಕೋಟಿ ರೂ ದಾಟಿರುವ ಆರು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಉತ್ತರಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡಿನ ನಂತರ ಕರ್ನಾಟಕವೇ ಅತಿ ದೊಡ್ಡ ಗಾತ್ರದ ಬಜೆಟ್ ಮಂಡಿಸಿರುವುದು.
ಅತಿದೊಡ್ಡ ಬಜೆಟ್ ಮಂಡಿಸಿರುವ ಪ್ರಮುಖ ರಾಜ್ಯಗಳಿವು
- ಉತ್ತರಪ್ರದೇಶ: 9.12 ಲಕ್ಷ ಕೋಟಿ ರೂ (2026-27)
- ಮಹಾರಾಷ್ಟ್ರ: 7 ಲಕ್ಷ ಕೋಟಿ ರೂ (2025-26)
- ರಾಜಸ್ಥಾನ: 6.11 ಲಕ್ಷ ಕೋಟಿ ರೂ (2026-27)
- ಕರ್ನಾಟಕ: 4.48 ಲಕ್ಷ ಕೋಟಿ ರೂ (2026-27)
- ತಮಿಳುನಾಡು: 4.39 ಲಕ್ಷ ಕೋಟಿ ರೂ (2025-26)
- ಗುಜರಾತ್: 4.08 ಲಕ್ಷ ಕೋಟಿ ರೂ (2026-27)
- ಪಶ್ಚಿಮ ಬಂಗಾಳ: 4.06 ಲಕ್ಷ ಕೋಟಿ ರೂ (2026-27 ಮಧ್ಯಂತರ ಬಜೆಟ್)
- ಆಂಧ್ರಪ್ರದೇಶ: 3.32 ಲಕ್ಷ ಕೋಟಿ ರೂ (2026-27)
- ಬಿಹಾರ್: 3.47 ಲಕ್ಷ ಕೋಟಿ ರೂ (2026-27)
- ಒಡಿಶಾ: 2.90 ಲಕ್ಷ ಕೋಟಿ ರೂ (2025-26)
ಇಲ್ಲಿ ಮೇಲಿನ ಪಟ್ಟಿಯಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಆದರೆ, ತಮಿಳುನಾಡಿನ ಬಜೆಟ್ ಗಾತ್ರ 2025-26ರ ಸಾಲಿನದ್ದು. ಈ ವರ್ಷ ಅದರ ಬಜೆಟ್ ಗಾತ್ರ 4.50 ಲಕ್ಷ ಕೋಟಿ ರೂ ದಾಟುವ ಸಾಧ್ಯತೆ ಇದೆ. ಹೀಗಾಗಿ, ಅತಿದೊಡ್ಡ ಬಜೆಟ್ ಗಾತ್ರ ಹೊಂದಿರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಐದನೇ ಸ್ಥಾನ ಪಡೆಯಬಹುದು.
ಉತ್ತರಪ್ರದೇಶವು ಅತ್ಯಂತ ಹಿಂದುಳಿದ ರಾಜ್ಯಗಳಲ್ಲಿ ಒಂದೆನಿಸಿದೆಯಾದರೂ ಅದರ ಭೌಗೋಳಿಕ ಗಾತ್ರ ವಿಶಾಲವಾಗಿದೆ. ಹೀಗಾಗಿ, ಅದರ ಜಿಡಿಪಿಯೂ ಕೂಡ ಅತಿದೊಡ್ಡದು. ಸಹಜವಾಗಿ ಅದರ ಬಜೆಟ್ ಗಾತ್ರವೂ ಹೆಚ್ಚಿದೆ. ಆದರೆ, ಗಮನಾರ್ಹ ಸಂಗತಿ ಎಂದರೆ, ಜಿಡಿಪಿ ಗಾತ್ರಕ್ಕೆ ಬಜೆಟ್ ಗಾತ್ರವನ್ನು ಹೋಲಿಸಿದಾಗ ಉತ್ತರಪ್ರದೇಶ ವಿಶೇಷವಾಗಿ ನಿಲ್ಲುತ್ತದೆ. ಅದರ ಬಜೆಟ್ ಗಾತ್ರವು ರಾಜ್ಯ ಜಿಡಿಪಿ ಶೇ. 25ಕ್ಕಿಂತಲೂ ಹೆಚ್ಚಿದೆ. ಇದಕ್ಕೆ ಹೋಲಿಸಿದರೆ, ಕರ್ನಾಟಕದ ಬಜೆಟ್ ಗಾತ್ರವು ಶೇ. 15ರ ಆಸುಪಾಸಿನಷ್ಟಿದೆ.
ಉತ್ತಮ ಆರ್ಥಿಕತೆ ಹೊಂದಿರುವ ರಾಜ್ಯಗಳ ಬಜೆಟ್ ಗಾತ್ರ ಸಾಮಾನ್ಯವಾಗಿ ಶೇ. 15ಕ್ಕಿಂತ ಕಡಿಮೆ ಇರುತ್ತದೆ. ಹಿಂದುಳಿದ ರಾಜ್ಯಗಳಿಗೆ ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರದಿಂದ ಹೆಚ್ಚು ಹೂಡಿಕೆ ಬೇಕಾಗುತ್ತದೆ. ಅಂಥ ರಾಜ್ಯಗಳಲ್ಲಿ ಬಜೆಟ್ ಗಾತ್ರ ಶೇ. 15ಕ್ಕಿಂತಲೂ ಹೆಚ್ಚಿರುತ್ತದೆ ಎಂಬುದು ಆರ್ಥಿಕ ತಜ್ಞರ ಅನಿಸಿಕೆ.
For More Updates Join our WhatsApp Group :




