ಸಚಿವ ವಿ. ಸೋಮಣ್ಣ ಉತ್ತರ, ಕೇಂದ್ರ–ರಾಜ್ಯ ನಡುವೆ ಗೊಂದಲ.
ಮಧುಗಿರಿ : ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಇನ್ನೂ ಹಣ ಬಿಡುಗಡೆ ಆಗಿಲ್ಲ ಎಂಬ ವಿಚಾರ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಸಂಬಂಧ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆರೋಪಗಳನ್ನು ಮಾಡಿದ್ದು, ಯೋಜನೆಗೆ ಅನುದಾನ ನೀಡದೇ ಇರುವುದು ರಾಜ್ಯದ ಜನತೆಗೆ ಮಾಡಿದ ದ್ರೋಹ ಎಂದು ದೂರಿದ್ದಾರೆ. ವಿಶೇಷವಾಗಿ ಮಧುಗಿರಿ ಸೇರಿದಂತೆ ಮಧ್ಯ ಕರ್ನಾಟಕದ ಜನರಿಗೆ ಈ ಯೋಜನೆ ಬಹಳ ಮಹತ್ವದ್ದಾಗಿದ್ದು, ಹಣ ಬಿಡುಗಡೆ ವಿಳಂಬವಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ವಿ. ಸೋಮಣ್ಣ, ತೀಕ್ಷ್ಣ ವ್ಯಂಗ್ಯವಾಡುತ್ತಾ ಉತ್ತರ ನೀಡಿದ್ದಾರೆ. “ಹಣ ಕೊಟ್ಟರೆ ಅದು ಎಲ್ಲಿ ಹೋಗುತ್ತದೆ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ” ಎಂದು ಹೇಳುವ ಮೂಲಕ ಕಾಂಗ್ರೆಸ್ ಆಡಳಿತದ ಮೇಲೆ ನೇರ ಟಾಂಗ್ ನೀಡಿದ್ದಾರೆ. ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಮತ್ತು ಹಣದ ಬಳಕೆಯ ಬಗ್ಗೆ ಕೇಂದ್ರಕ್ಕೆ ಸ್ಪಷ್ಟತೆ ಬೇಕಿದೆ ಎಂಬ ಸಂದೇಶವನ್ನು ಅವರು ಪರೋಕ್ಷವಾಗಿ ನೀಡಿದ್ದಾರೆ.
ಇದೇ ವೇಳೆ, ಭದ್ರಾ ಮೇಲ್ದಂಡೆ ಯೋಜನೆಗೆ ಇನ್ನೂ 5,000 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವ ಅವಕಾಶ ಇದೆ ಎಂದು ಸಚಿವ ಸೋಮಣ್ಣ ಸ್ಪಷ್ಟಪಡಿಸಿದ್ದಾರೆ. ಯೋಜನೆ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ವಿರೋಧದಿಂದಲೇ ಸ್ಥಗಿತಗೊಂಡಿದೆ ಎಂಬ ಆರೋಪ ಸತ್ಯವಲ್ಲ ಎಂದು ಅವರು ಹೇಳಿದರು. ಅಗತ್ಯ ಪ್ರಕ್ರಿಯೆಗಳು ಮತ್ತು ದಾಖಲೆಗಳು ಸರಿಯಾಗಿ ಸಲ್ಲಿಕೆಯಾಗಬೇಕು ಎಂಬುದನ್ನು ಅವರು ಒತ್ತಿ ಹೇಳಿದರು.
ಈ ನಡುವೆ, ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಗೆ ಆಗುತ್ತಿರುವ ತಾತ್ಸಾರವೇ ಈ ವಿಷಯ ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ. ರಾಜ್ಯದ ರೈತರು, ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಜನರು ಮತ್ತು ಸ್ಥಳೀಯ ಸಂಘಟನೆಗಳು ಶೀಘ್ರವಾಗಿ ಹಣ ಬಿಡುಗಡೆ ಆಗಬೇಕು ಎಂದು ಒತ್ತಾಯಿಸುತ್ತಿವೆ.
For More Updates Join our WhatsApp Group :




