ಜೋ ಬೈಡನ್ ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ತಮ್ಮ ಪ್ರಚಾರವನ್ನು ಮುಂದುವರಿಸಬೇಕಾ ಅಥವಾ ಬೇಡವಾ ಎಂಬ ಚರ್ಚೆ ಸದ್ಯ ಅವರ ಡೆಮೊಕ್ರಾಟ್ ಪಕ್ಷದಲ್ಲಿ ಜೋರಾಗಿ ನಡೆಯುತ್ತಿದೆ. ಭಾರತೀಯ ಮೂಲದ ವ್ಯಕ್ತಿ ಹಾಗೂ ವೈಸ್ ಪ್ರೆಸಿಡೆಂಟ್ ಕಮಲಾ ಹ್ಯಾರಿಸ್ ಅವರನ್ನು ಅಧ್ಯಕ್ಷೀಯ ಅಭ್ಯರ್ಥಿಯನ್ನಾಗಿಸಿದರೆ ಡೆಮಾಕ್ರಟಿಕ್ ಪಕ್ಷವು ಮತ್ತೊಮ್ಮೆ ಅಧಿಕಾರಕ್ಕೇರುವ ಸಾಧ್ಯತೆಗಳಿವೆ ಎಂದು ಅಮೆರಿಕದ ಖ್ಯಾತ ರಾಜಕೀಯ ವಿಶ್ಲೇಷಕ ಅಲನ್ ಲಿಚ್ಮನ್ ಹೇಳಿದ್ದಾರೆ. ಈ ಹಿಂದೆ ಅನೇಕ ಬಾರಿ ಅಲನ್ ಲಿಚ್ಮನ್ ಅವರ ರಾಜಕೀಯ ಊಹೆಗಳು ಸತ್ಯವಾಗಿವೆ.
“ಜೋ ಬೈಡನ್ ಗೆಲ್ಲುವ ಸಾಕಷ್ಟು ಅವಕಾಶ ಹೊಂದಿದ್ದರೂ ಡೆಮಾಕ್ರಟಿಕ್ ಪಕ್ಷ ಅವರನ್ನು ಹೊರಹಾಕಿದರೆ, ಅವರು ಅಧ್ಯಕ್ಷೀಯ ಅಭ್ಯರ್ಥಿಯ ರೇಸ್ನಿಂದ ಹಿಂದೆ ಸರಿಯಬೇಕು. ಕಮಲಾ ಹ್ಯಾರಿಸ್ ಅವರನ್ನು ಒಮ್ಮತದ ಅಧ್ಯಕ್ಷೀಯ ಅಭ್ಯರ್ಥಿಯನ್ನಾಗಿಸಲು ಅವರು ಮುಂದಿನ ಹಂತದ ಚುನಾವಣಾ ಯೋಜನೆಯನ್ನು ರೂಪಿಸಬೇಕು. ಹೀಗೆ ಮಾಡಿದಲ್ಲಿ ಡೆಮಾಕ್ರಟಿಕ್ ಪಕ್ಷವು ಮತ್ತೆ ಗೆಲ್ಲಲಿದೆ” ಎಂದು ಅಲನ್ ಲಿಚ್ಮನ್ ಗುರುವಾರ ಸಂಜೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಳೆದ ಶನಿವಾರ ಪೆನ್ಸಿಲ್ವೇನಿಯಾದಲ್ಲಿ ರಿಪಬ್ಲಿಕನ್ ಪ್ರತಿಸ್ಪರ್ಧಿ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಕೊಲೆ ಯತ್ನ ನಡೆದಿತ್ತು. ಇದರ ನಂತರ ಚುನಾವಣಾ ಪ್ರಚಾರದಲ್ಲಿ ಟ್ರಂಪ್ ಮುನ್ನಡೆ ಸಾಧಿಸಿದ್ದಾರೆ ಎಂದು ವರದಿಗಳು ಹೇಳಿವೆ. ಏತನ್ಮಧ್ಯೆ ಬೈಡನ್ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಮುಂದುವರೆದಿದ್ದಾರೆ.
ಬೈಡನ್ಗೆ 81 ವರ್ಷ ವಯಸ್ಸಾಗಿರುವುದರಿಂದ ಮತ್ತು ಟ್ರಂಪ್ ವಿರುದ್ಧದ ಟಿವಿ ಚರ್ಚೆಯಲ್ಲಿ ಅವರ ಕಳಪೆ ಪ್ರದರ್ಶನಕ್ಕಾಗಿ ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಬೇಕೆಂದು ಡೆಮಾಕ್ರಟಿಕ್ ಪಕ್ಷದೊಳಗೆ ಒತ್ತಡ ಹೆಚ್ಚಾಗುತ್ತಿದೆ. ಪ್ರಸ್ತುತ ಬೈಡನ್ಗೆ ಮತ್ತೆ ಕೋವಿಡ್ -19 ಸೋಂಕು ತಗುಲಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಎಲ್ಲ ಕಾರಣಗಳಿಗಾಗಿ ಲಿಚ್ಮನ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.