ಯಮುನಾ ಎಕ್ಸ್‌ಪ್ರೆಸ್‌ವೇ ದುರಂತ.

ಯಮುನಾ ಎಕ್ಸ್‌ಪ್ರೆಸ್‌ವೇ ದುರಂತ.

ಬಸ್ ನಿಲ್ಲಿಸಿದ್ದಾಗ ಹರಿದ ಕಂಟೇನರ್ – 6 ಮಂದಿ ಸ್ಥಳದಲ್ಲೇ ಸಾ*.

ಮಥುರಾ: ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಅತಿವೇಗದ ಚಾಲನೆ ಮತ್ತು ನಿಯಮ ಉಲ್ಲಂಘನೆಯ ಪರಿಣಾಮವಾಗಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಆರು ಮಂದಿ ದುರ್ಮರಣಕ್ಕೀಡಾದ ಘಟನೆ ಶನಿವಾರ ಬೆಳಗಿನ ಜಾವ 2:45 ರ ಸುಮಾರಿಗೆ ನಡೆದಿದೆ. ಸುರಿರ್ ಪೊಲೀಸ್ ಠಾಣೆ ವ್ಯಾಪ್ತಿಯ ಮೈಲ್‌ಸ್ಟೋನ್ 88 ಬಳಿ ಈ ದುರಂತ ನಡೆದಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ದೆಹಲಿಯಿಂದ ಕಾನ್ಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಬೆಳಗಿನ ಜಾವ ಸುಮಾರು 2:45 ರ ಸುಮಾರಿಗೆ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಚರಿಸುತ್ತಿತ್ತು. ಪ್ರಯಾಣದ ಮಧ್ಯೆ ಪ್ರಯಾಣಿಕರು ಶೌಚಾಲಯ ಬಳಸಲು ಬಸ್ ನಿಲ್ಲಿಸಲಾಗಿದೆ. ಇನ್ನು ಚಾಲಕ ಹಸಿರು ವಲಯದಲ್ಲಿ ಬಸ್ ನಿಲ್ಲಿಸುವ ಬದಲು ರಸ್ತೆಯಲ್ಲೇ ನಿಲ್ಲಿಸಿದ್ದ. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಂಟೇನರ್ ಬಸ್‌ಗೆ ಡಿಕ್ಕಿ ಹೊಡೆದು ಕೆಳಗೆ ನಿಂತಿದ್ದ ಪ್ರಯಾಣಿಕರ ಮೇಲೆ ಹರಿದಿದೆ. ಡಿಕ್ಕಿ ಎಷ್ಟು ಭೀಕರವಾಗಿತ್ತೆಂದರೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಮೃತರಲ್ಲಿ ಬಸ್ತಿ ನಿವಾಸಿ ದೇವೇಶ್, ಔರೈಯಾದ ಸೋನು, ಕನ್ನೌಜ್ನ ಅಸ್ಲಾಂ ಹಾಗೂ ದೆಹಲಿಯ ಸಂತೋಷ್ ಎಂದು ನಾಲ್ವರನ್ನು ಗುರುತಿಸಲಾಗಿದೆ. ಉಳಿದ ಇಬ್ಬರ ಗುರುತು ಪತ್ತೆಹಚ್ಚುವ ಕೆಲಸ ಮುಂದುವರಿದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಅಪಘಾತಕ್ಕೆ ಮುಖ್ಯ ಕಾರಣ ನಿಯಮ ಉಲ್ಲಂಘಿಸಿ ಬಸ್ ಹೈವೇಯಲ್ಲೇ ನಿಲ್ಲಿಸಿರುವುದು ಮತ್ತು ಕಂಟೇನರ್‌ ಅತಿವೇಗದ ಚಲನೆ ಎಂದು ತಿಳಿದುಬಂದಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *