ಕೋಪ ಹೆಚ್ಚಾದರೆ ಹೃದಯಾಘಾತದ ಅಪಾಯ ಹೆಚ್ಚಾಗುತ್ತೆ ಏನನ್ನುತ್ತೆ ಸಂಶೋಧನೆ.?

ಕೋಪ ಹೆಚ್ಚಾದರೆ ಹೃದಯಾಘಾತದ ಅಪಾಯ ಹೆಚ್ಚಾಗುತ್ತೆ ಏನನ್ನುತ್ತೆ ಸಂಶೋಧನೆ.?

ಜಾನ್ಸ್ ಹಾಪ್ಕಿನ್ಸ್ ಮತ್ತು ಯುರೋಪಿಯನ್ ಅಧ್ಯಯನದ ವರದಿ

ಹೃದಯಾಘಾತವಾಗುವುದಕ್ಕೆ ಹಲವು ಕಾರಣಗಳಿರಬಹುದು. ಆದರೆ ಪದೇ ಪದೇ ಕೋಪಗೊಳ್ಳುವುದು ಹೃದಯದ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು ಎಂಬುದು ನಿಮಗೆ ತಿಳಿದಿದೆಯೇ… ಹೌದು, ಅಮೆರಿಕದ ಪ್ರತಿಷ್ಠಿತ ಸಂಸ್ಥೆಯಾದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸಂಶೋಧನೆಯು, ತಕ್ಷಣ ಕೋಪ ಮಾಡಿಕೊಂಡು ಕೂಗಾಡಿದ ನಂತರದ ಎರಡು ಗಂಟೆಗಳಲ್ಲಿ ಹೃದಯಾಘಾತದ  ಅಪಾಯವು ಸುಮಾರು 5 ಪಟ್ಟು ಹೆಚ್ಚಾಗಿರುತ್ತದೆ ಎಂಬುದನ್ನು ಕಂಡುಹಿಡಿದಿದೆ. ಅಷ್ಟೇ ಅಲ್ಲ, ಯುರೋಪಿಯನ್ ಹಾರ್ಟ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಒಬ್ಬ ವ್ಯಕ್ತಿ ಆಗಾಗ ಮತ್ತು ಅತಿಯಾಗಿ ಸಿಟ್ಟು ಮಾಡಿಕೊಳ್ಳುವುದು ಆತನ ಹೃದಯಕ್ಕೆ ಹೆಚ್ಚು ಅಪಾಯಕಾರಿ ಎಂದಿದೆ. ಕೋಪಗೊಳ್ಳದ ಪುರುಷರಿಗೆ ಹೋಲಿಸಿದರೆ, ಕೋಪಗೊಳ್ಳುವವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಇಲ್ಲದಿದ್ದರೂ ಸಹ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ. ಹಾಗಾದರೆ ಕೋಪ ಮತ್ತು ಹೃದಯಾಘಾತಕ್ಕೆ ಇರುವ ಸಂಬಂಧವೇನು, ಕೋಪ ಕಡಿಮೆ ಮಾಡಿಕೊಳ್ಳಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕೋಪ ಮತ್ತು ಹೃದಯಾಘಾತಕ್ಕಿರುವ ಸಂಬಂಧ?

ಸಾಮಾನ್ಯವಾಗಿ ಕೋಪ ಮಾಡಿಕೊಂಡ ಸಮಯದಲ್ಲಿ, ಕ್ಯಾಟೆಕೊಲಮೈನ್ಸ್ ಎಂಬ ಒತ್ತಡದ ಹಾರ್ಮೋನ್ ದೇಹದಲ್ಲಿ ವೇಗವಾಗಿ ಹೆಚ್ಚಾಗುತ್ತದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದ್ದು. ಇವು ದೇಹದಲ್ಲಿ ರಕ್ತದೊತ್ತಡವನ್ನು ತ್ವರಿತವಾಗಿ ಹೆಚ್ಚಿಸುವ ಹಾರ್ಮೋನುಗಳಾಗಿವೆ. ಒತ್ತಡವು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡದ ಹೆಚ್ಚಳವು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಸಂಶೋಧನಾ ತಜ್ಞ ಡಾ. ಇಲಾನ್ ವಿಟ್ಸ್‌ಟೈನ್ ಅವರ ಪ್ರಕಾರ, ಕೋಪದ ಸಮಯದಲ್ಲಿ ಒತ್ತಡದ ಹಾರ್ಮೋನು ಒಮ್ಮೆಲೇ ಹೆಚ್ಚಾಗುವುದು ಹೃದಯಾಘಾತವನ್ನು ಪ್ರಚೋದಿಸಬಹುದು ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು. ಅದರಲ್ಲಿಯೂ ಈ ರೀತಿಯ ಅಪಾಯ ಪುರುಷರಲ್ಲಿ ಹೆಚ್ಚು ಕಂಡುಬರುವುದನ್ನು ಗಮನಿಸಲಾಗಿದೆ.

ಜಾನ್ಸ್ ಹಾಪ್ಕಿನ್ಸ್ ಮೆಡಿಸಿನ್ ನಡೆಸಿದ ಸಂಶೋಧನೆ ಹೇಳುವ ಪ್ರಕಾರ, ಯಾವುದೇ ರೀತಿಯ ಗಂಭೀರ ಕಾಯಿಲೆ ಇಲ್ಲದಿದ್ದರೂ ಸಹ, ಆಗಾಗ ಕೋಪಗೊಳ್ಳುವವರಲ್ಲಿ ಹೃದಯಾಘಾತದ ಅಪಾಯ ಐದು ಪಟ್ಟು ಹೆಚ್ಚಾಗಿರುತ್ತದೆ. ಹಾಗಾಗಿ ಕೋಪ ಮಾಡಿಕೊಳ್ಳುವುದನ್ನು ಕಡಿಮೆ ಮಾಡಬೇಕು. ಅದು ನಿಮ್ಮನ್ನು ನಿಯಂತ್ರಿಸುವ ಮೊದಲು ನೀವೇ ಅದನ್ನು ನಿಯಂತ್ರಿಸುವುದು ಒಳ್ಳೆಯದು. ಕೋಪದಿಂದ ಆದಷ್ಟು ದೇಹವನ್ನು ರಕ್ಷಿಸಿಕೊಳ್ಳಲು ಮತ್ತು ಅದನ್ನು ಕಡಿಮೆ ಮಾಡಲು ಪ್ರತಿನಿತ್ಯ ಯೋಗ ಅಭ್ಯಾಸ ಮಾಡಿ, ಧ್ಯಾನ ಮಾಡಿ, ಕೋಪಗೊಂಡಾಗ ತಕ್ಷಣ ಪ್ರತಿಕ್ರಿಯಿಸಬೇಡಿ, ನಿಮಗೆ ಅಗತ್ಯವಿದ್ದರೆ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *