ದೊಡ್ಡಬಳ್ಳಾಪುರ: ಉಪನಗರದ ಹೊರವರ್ತುಲ ರಸ್ತೆಯ ದಾಬಸ್ ಪೇಟೆ ಮತ್ತು ದೊಡ್ಡಬಳ್ಳಾಪುರ ಟೋಲ್ ರಸ್ತೆ ಪೂರ್ಣಗೊಂಡಿದ್ದು, ಹುಲಿಕುಂಟೆ ಗ್ರಾಮದಲ್ಲಿನ ಟೋಲ್ ಫ್ಲಾಜಾದಲ್ಲಿ ಟೋಲ್ ಸುಂಕ ಸಂಗ್ರಹ ಜೂನ್ 14ರಿಂದ ಪ್ರಾರಂಭವಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.
ಜೂನ್ 14 ರಿಂದ ಎಲ್ಲ ರೀತಿಯ ಖಾಸಗಿ ಮತ್ತು ವಾಣಿಜ್ಯ ವಾಹನಗಳು ದರಪಟ್ಟಿ ಪ್ರಕಾರ ಸುಂಕ ಪಾವತಿಸಬೇಕಿದೆ. ದ್ವಿಚಕ್ರ ವಾಹನಗಳಿಗೆ ಮಾತ್ರ ಟೋಲ್ ಸುಂಕದಿಂದ ವಿನಾಯಾತಿ ನೀಡಲಾಗಿದೆ ಎಂದು ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ. ದರಪಟ್ಟಿಯನ್ನು ಸಹ ಪ್ರಕಟಿಸಿದೆ.
ದಿನದ 24 ಗಂಟೆಯಲ್ಲಿ ಕಾರಿನ ಒಂದು ಕಡೆ ಸಂಚಾರಕ್ಕೆ 105 ರೂಪಾಯಿ, ವಾಪಸ್ ಬರಲು 155 ರೂಪಾಯಿ ನಿಗದಿ ಮಾಡಿದೆ. ಮಾಸಿಕ ಪಾಸ್ನಲ್ಲಿ 50 ಸಲ ಒನ್ ವೇ ಪ್ರಯಾಣಕ್ಕೆ ಅವಕಾಶ ಇದ್ದು, 3,470 ರೂಪಾಯಿ ನಿಗದಿ ಮಾಡಿದೆ. ಅಲ್ಲದೇ ಭಾರಿ ವಾಹನ ಸೇರಿದಂತೆ ವಿವಿಧ ವಾಹನಗಳಿಗೆ ಬೇರೆ ಬೇರೆ ಶುಲ್ಕ ನಿಗದಿಪಡಿಸಿದೆ.
ಡಾಬಸ್‌ಪೇಟೆ – ದೊಡ್ಡಬಳ್ಳಾಪುರ ಮಾರ್ಗ ಸಂಚಾರಕ್ಕೆ ಮುಕ್ತವಾದ ಬಳಿಕ ತುಮಕೂರು ರಸ್ತೆಯಿಂದ ಬೆಂಗಳೂರು ನಗರಕ್ಕೆ ಬರುವ ಭಾರೀ ವಾಹನಗಳ ಪ್ರಮಾಣ ತಗ್ಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.