ಕೊಟ್ಟ ಭರವಸೆ ಈಡೇರಿಸದ ಬಿಜೆಪಿ, ವಚನಭ್ರಷ್ಟ: ಈಶ್ವರಖಂಡ್ರೆ
ಕೃಷ್ಣಗಿರಿ : ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿ ಮಾತು ತಪ್ಪಿದ, ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿ ಯುವಜನರ ಆಕಾಂಕ್ಷೆಗಳಿಗೆ ತಣ್ಣೀರೆರೆಚಿದ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರ್ಕಾರ ವಚನಭ್ರಷ್ಟವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೃಷ್ಣಗಿರಿಯಲ್ಲಿಂದು ಕಾಂಗ್ರೆಸ್ -ಡಿಎಂಕೆ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಅವರು, ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿದೇಶದಿಂದ ಕಪ್ಪುಹಣ ತರುವುದಾಗಿ, 2022ರ ಹೊತ್ತಿಗೆ ಸರ್ವರಿಗೂ ಸೂರು ಎಂದು ಘೋಷಿಸಿದ ಪ್ರಧಾನಿ ನಡುದಂತೆ ನಡೆಯಲೇ ಇಲ್ಲ ಎಂದು ಟೀಕಿಸಿದರು.
ಕೇಂದ್ರ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ, ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳಾದ ಇ.ಡಿ, ಸಿಬಿಐ, ಐ.ಟಿ. ಮೊದಲಾದ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ದಕ್ಷಿಣ ರಾಜ್ಯಗಳ ಬಗ್ಗೆ ಮಲತಾಯಿ ಧೋರಣೆ ತಳೆದಿದೆ. ದಕ್ಷಿಣ ರಾಜ್ಯಗಳಿಗೆ ಅದರಲ್ಲೂ ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಕ್ಕೆ ತೆರಿಗೆಯ ಪಾಲು, ಅನುದಾನ, ಜಿಎಸ್ಟಿ ಪರಿಹಾರ, ಬರ, ಪ್ರವಾಹ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದೂ ದೂಷಿಸಿದರು.
ಕರ್ನಾಟಕದಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿಗಳನ್ನು ಘೋಷಿಸಿತ್ತು. ನಮ್ಮ ಸರ್ಕಾರ ಎಲ್ಲ 5 ಗ್ಯಾರಂಟಿಗಳನ್ನೂ ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದ್ದು ನುಡಿದಂತೆ ನಡೆದಿದ್ದೇವೆ. ಪ್ರತಿ ವರ್ಷ 53 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿದೆ. ಈ ಗ್ಯಾರಂಟಿಗಳಿಂದ 1 ಕೋಟಿ ಕುಟುಂಬಗಳು ಬಡತನ ರೇಖೆಯಿಂದ ಮೇಲೆ ಬಂದಿವೆ. ಮಹಿಳೆಯರ ಆರ್ಥಿಕ ಸಬಲೀಕರಣವಾಗಿದೆ. ಕರ್ನಾಟಕದ ತಲಾದಾಯ ದೇಶದಲ್ಲೇ ಅತ್ಯುತ್ತಮವಾಗಿರುವುದಕ್ಕೆ ಈ ಗ್ಯಾರಂಟಿಗಳು ಕಾರಣ ಎಂದರು.
For More Updates Join our WhatsApp Group :




