‘ಗೋಲ್ಮಾಲ್’ ಖ್ಯಾತಿಯ ರೋಹಿತ್ ಶೆಟ್ಟಿ ನಿವಾಸ ಟಾರ್ಗೆಟ್.
ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮನೆ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಮುಂಬೈನ ಜುಹುನಲ್ಲಿ ರೋಹಿತ್ಶೆಟ್ಟಿನಿವಾಸ ಇದೆ. ಶನಿವಾರ (ಜನವರಿ 31) ರಾತ್ರಿ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಗುಂಡಿನ ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ. ಒಟ್ಟು ನಾಲ್ಕು ಸುತ್ತು ಗುಂಡು ಹಾರಿಸಲಾಯಿತು ಎಂದು ಸ್ಥಳೀಯರು ಹೇಳಿದ್ದಾರೆ. ಈ ಕೃತ್ಯ ಎಸಗಿದವರು ಯಾರು ಎಂಬುದು ಇನ್ನೂ ಪತ್ತೆ ಆಗಿಲ್ಲ. ಘಟನೆ ನಡೆದ ಕೂಡಲೇ ಕಾರ್ಯಪ್ರವೃತ್ತರಾಗಿರುವ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಯಾವ ಉದ್ದೇಶದಿಂದ ಗುಂಡಿನ ದಾಳಿ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಆ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಎಲ್ಲ ಆಯಾಮದಿಂದಲೂ ತನಿಖೆ ಚುರುಕುಕೊಂಡಿದೆ. ಈ ಘಟನೆಯಿಂದಾಗಿ ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಆತಂಕ ಹೆಚ್ಚಾಗಿದೆ. ಈ ಮೊದಲು ನಟ ಸಲ್ಮಾನ್ ಖಾನ್ ಅವರ ನಿವಾಸದ ಮೇಲೆ ಕೂಡ ಇದೇ ರೀತಿ ಗುಂಡಿನ ದಾಳಿ ಮಾಡಲಾಗಿತ್ತು.
ರೋಹಿತ್ ಶೆಟ್ಟಿ ಅವರ ನಿವಾಸಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಗುಂಡಿನ ದಾಳಿ ನಡೆದ ಜಾಗದಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ತನಿಖೆ ಮಾಡಲಾಗುತ್ತಿದೆ. ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಕೂಡ ಸ್ಥಳಕ್ಕೆ ಆಗಮಿಸಿ ಅಗತ್ಯ ಮಾಹಿತಿ ಕಲೆಹಾಕುತ್ತಿದೆ. ಕೆಲವು ವಿಡಿಯೋಗಳು ವೈರಲ್ ಆಗಿವೆ.
ಈ ಗುಂಡಿನ ದಾಳಿಯಲ್ಲಿ ವಿದೇಶಿ ಭಯೋತ್ಪಾದಕರ ಕೈವಾಡ ಇದೆಯಾ ಎಂಬುದನ್ನು ಕೂಡ ಪತ್ತೆ ಹಚ್ಚಲಾಗುತ್ತಿದೆ. ಸದ್ಯಕ್ಕೆ ಯಾವುದೇ ಸುಳಿವು ಸಿಕ್ಕಿಲ್ಲ. ಯಾರು ಕೂಡ ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಘಟನೆಗೆ ಸಂಬಂಧಿಸಿದಂತೆ ರೋಹಿತ್ ಶೆಟ್ಟಿ ಹಾಗೂ ಅವರ ಕುಟುಂಬದರು ಹೇಳಿಕೆ ನೀಡುವುದು ಬಾಕಿ ಇದೆ.
For More Updates Join our WhatsApp Group :




