ದಾಖಲಾದ ಒಂದು ವರ್ಷದೊಳಗೆ 20 ಅಗ್ನಿವೀರರ ಸಾವು

ನವದೆಹಲಿ: ಒಂದೆಡೆ ಅಗ್ನಿಪಥ್ ಯೋಜನೆಯು ವಿವಾದದಲ್ಲಿ ಮುಳುಗಿದೆ. ಮತ್ತೊಂದೆಡೆ ಕಳೆದ ಒಂದು ವರ್ಷದೊಳಗೆ ಸುಮಾರು 20 ಅಗ್ನಿವೀರರ ಸಾವುಗಳು ವರದಿಯಾಗಿದ್ದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ಅಗ್ನಿವೀರರ ಮೊದಲ ಬ್ಯಾಚ್ ಆಗಸ್ಟ್ 2023 ರಲ್ಲಿ ಸೇನೆಗೆ ಸೇರಿತು. ಸೇನೆಯಲ್ಲಿ ಸುಮಾರು 18 ಮಂದಿ ಸಾವುನ್ನಪ್ಪಿರುವುದನ್ನು ಮೂಲಗಳು ದೃಢಪಡಿಸಿವೆ, ಇತ್ತೀಚೆಗೆ ಐಎಎಫ್‌ನ ಅಗ್ನಿವೀರ್‌ನ ಆತ್ಮಹತ್ಯೆಗೆ ಶರಣಾಗಿದ್ದರು. ಐಎಎಫ್‌ಗೆ ಸಂಬಂಧಿಸಿದಂತೆ ಇದು ಮೊದಲನೆಯ ಪ್ರಕರಣವಾಗಿತ್ತು. ಶ್ರೀಕಾಂತ್ ಕುಮಾರ್ ಚೌಧರಿ (22) ಅವರು ಮಂಗಳವಾರ ತಡರಾತ್ರಿ ಆಗ್ರಾದ ವಾಯುಪಡೆಯ ನಿಲ್ದಾಣದಲ್ಲಿ ಸೆಂಟ್ರಿ ಕರ್ತವ್ಯದಲ್ಲಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಐಎಎಫ್ ಮೂಲಗಳು ದೃಢಪಡಿಸಿವೆ. ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯವರಾದ ಚೌಧರಿ ಅವರು 2022 ರಲ್ಲಿ ಭಾರತೀಯ ವಾಯುಸೇನೆಗೆ ಅಗ್ನಿವೀರ್ ಆಗಿ ಸೇರಿದ್ದರು. ಅವರ ಸಾವಿಗೆ ಕಾರಣವೇನು ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖಾ ಮಂಡಳಿಯನ್ನು ರಚಿಸಲಾಗಿದೆ ಎಂದು ವರದಿಯಾಗಿದೆ.

ಕಾಕತಾಳೀಯವೆಂಬಂತೆ ಸೇನೆಯೊಳಗೆ ಅಗ್ನಿವೀರನೊಬ್ಬನ ಆತ್ಮಹತ್ಯೆ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಮೊದಲು ವರದಿ ಮಾಡಿದಂತೆ, ಅಕ್ಟೋಬರ್ 11, 2023 ರಂದು, ಜಮ್ಮುವಿನಲ್ಲಿ ನಿಧನರಾದ ಅಗ್ನಿವೀರ್ ಅಮೃತಪಾಲ್ ಸಿಂಗ್ ಅವವರಿಗೆ ಮಿಲಿಟರಿ ಅಂತ್ಯಕ್ರಿಯೆ ನಡೆಸದ ಕಾರಣ ಟೀಕೆಗಳನ್ನು ಎದುರಿಸಬೇಕಾಯಿತು. ನಂತರ ಸ್ವಯಂ ಪ್ರೇರಿತ ಗಾಯದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಸೇನೆ ಸ್ಪಷ್ಟಪಡಿಸಿತು. ಆತ್ಮಹತ್ಯೆಯಿಂದ ಸಾವು ಸಂಭವಿಸಿದಾಗ ಗೌರವಧನ ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಂತರ, ಅಗ್ನಿವೀರ್ (ಆಪರೇಟರ್) ಗವಟೆ ಅಕ್ಷಯ್ ಲಕ್ಷ್ಮಣ್ ಅವರು ಅಕ್ಟೋಬರ್ 22, 2023 ರಂದು ಸಿಯಾಚಿನ್‌ನಲ್ಲಿ ಕರ್ತವ್ಯದಲ್ಲಿದ್ದಾಗ ನಿಧನರಾದರು. ಅದರ ನಂತರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಲಕ್ಷ್ಮಣ್ ಅವರ ಕುಟುಂಬಕ್ಕೆ ಯಾವುದೇ ಗ್ರಾಚ್ಯುಟಿ, ಪಿಂಚಣಿ ಅಥವಾ ಇತರ ಪ್ರಯೋಜನಗಳನ್ನು ಪಡೆದಿಲ್ಲ ಎಂದು ಆರೋಪಿಸಿದ್ದರು. ಅಗ್ನಿವೀರ್ ಯೋಜನೆಯು ಯೋಧರಿಗೆ ಮಾಡಿದ ಅವಮಾನ ಎಂದು ಕಿಡಿ ಕಾರಿದ್ದರು.

ಇತ್ತೀಚಿನ ವಿವಾದವು ಅಗ್ನಿವೀರ್ ಅಜಯ್ ಸಿಂಗ್ ಅವರ ವೇತನ ಮತ್ತು ಅರ್ಹತೆಗಳಿಗೆ ಸಂಬಂಧಿಸಿದೆ. ಅಜಯ್ ಸಿಂಗ್ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಗಾಂಧಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಡುವಿನ ವಾಕ್ಸಮರಕ್ಕೆ ಸಂಸತ್ತು ಸಾಕ್ಷಿಯಾಯಿತು. ಈ ವರ್ಷದ ಜನವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಸೆಕ್ಟರ್‌ನಲ್ಲಿ ನೆಲಬಾಂಬ್ ಸ್ಫೋಟದಲ್ಲಿ ಅಗ್ನಿವೀರ್ ಸಾವನ್ನಪ್ಪಿದ್ದರು.

ಅಜಯ್ ಸಿಂಗ್ ಕುಟುಂಬಕ್ಕೆ ಯಾವುದೇ ಪರಿಹಾರ ನೀಡಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಆದರೆ, ಆರೋಪ ಸುಳ್ಳು ಎಂದ ರಾಜನಾಥ್ ಸಿಂಗ್, ಕರ್ತವ್ಯದಲ್ಲಿದ್ದಾಗ ಸಾವನ್ನಪ್ಪುವ ಅಗ್ನಿವೀರರ ಕುಟುಂಬಗಳಿಗೆ ಸರ್ಕಾರ 1 ಕೋಟಿ ರೂಪಾಯಿ ಪರಿಹಾರವನ್ನು ನೀಡುತ್ತದೆ ಎಂದು ಹೇಳಿದರು

Leave a Reply

Your email address will not be published. Required fields are marked *