ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬಿಎಂಟಿಸಿ, ಕೆಕೆಆರ್ಟಿಸಿ, ಕೆಯುಡಬ್ಲುಎಸ್ಡಿಬಿಯ ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯು ಜು.13 ಮತ್ತು 14ರಂದು ನಡೆಯಲಿದೆ. ಈ ಪರೀಕ್ಷೆಗೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆಯನ್ನು ಜಾರಿ ಮಾಡಲಾಗಿದೆ.
ಪುರುಷ ಅಭ್ಯರ್ಥಿಗಳು ತುಂಬು ತೋಳಿನ ಅಂಗಿ, ಜೀನ್ಸ್ ಪ್ಯಾಂಟ್, ಕಸೂತಿ ಬಟ್ಟೆ, ಶೂ, ಕಿವಿಯೋಲೆ, ಉಂಗುರ, ಸರ, ಕಡಗ ಧರಿಸುವುದನ್ನು ನಿಷೇಧಿಸಲಾಗಿದೆ
ಅರ್ಧತೋಳಿನ ಅಂಗಿ, ಕುರ್ತ, ಫೈಜಾಮ, ಜೇಬುಗಳು ಕಡಿಮೆ ಇರುವ ಪ್ಯಾಂಟ್, ತೆಳುವಾದ ಚಪ್ಪಲಿ ಧರಿಸಬಹುದಾಗಿದೆ. ಮಹಿಳಾ ಅಭ್ಯರ್ಥಿಗಳು ಕಸೂತಿ, ಹೂಗಳು, ಬ್ರೂಚ್ಗಳು, ಬಟನ್ಗಳು ಹೊಂದಿರುವ ಬಟ್ಟೆಗಳನ್ನು, ಜೀನ್ಸ್ ಪ್ಯಾಂಟ್, ಎತ್ತರವಾದ ಹಿಮಡಿಯ ಶೂ, ಚಪ್ಪಲಿಗಳನ್ನು, ಮಂಗಳಸೂತ್ರ , ಕಾಲುಂಗುರ ಹೊರತುಪಡಿಸಿ ಯಾವುದೇ ರೀತಿಯ ಲೋಹದ ಆಭರಣಗಳನ್ನು ಪರೀಕ್ಷಾ ಕೊಠಡಿಗೆ ನಿಷೇಧಿಸಿದೆ. ಅರ್ಧತೋಳಿನ ಬಟ್ಟೆಗಳನ್ನು , ತೆಳುವಾದ ಅಡಿ ಭಾಗ ಹೊಂದಿರುವ ಚಪ್ಪಲಿಗಳನ್ನು ಧರಿಸಬಹುದಾಗಿದೆ.
ಈ ಡ್ರೆಸ್ ಕೋಡ್ ಅನುಸರಿಸುವುದರ ಜೊತೆಗೆ ಎಲ್ಲ ಅಭ್ಯರ್ಥಿಗಳು ನಿಷೇಧಿತ ವಸ್ತುಗಳನ್ನು ಪರೀಕ್ಷಾ ಕೊಠಡಿಗೆ ಕೊಂಡೊಯ್ಯುವಂತಿಲ್ಲ. ಎಲೆಕ್ಟ್ರಾನಿಕ್ ವಸ್ತುಗಳು, ಪೆನ್ಡ್ರೈವ್, ಮೈಕ್ರೊಫೋನ್, ಬ್ಲೂಟೂತ್, ಕೈಗಡಿಯಾರ, ತಿನ್ನಬಹುದಾದ ಪದಾರ್ಥಗಳು, ಕುಡಿಯುವ ನೀರಿನ ಬಾಟಲ್, ಪೆನ್ಸಿಲ್, ಪೇಪರ್, ಎರೈಸರ್, ಟೋಪಿ, ಮಾಸ್ಕ್ ನಿಷೇಧಿಸಲಾಗಿದೆ.
ಪರೀಕ್ಷಾ ಕೇಂದ್ರದಲ್ಲಿಯೇ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಪ್ರವೇಶ ಪತ್ರವನ್ನು ಕಡ್ಡಾಯವಾಗಿ ತರಬೇಕು. ಸರ್ಕಾರದಿಂದ ಮಾನ್ಯವಾದ ಗುರುತಿನಚೀಟಿ ತರುವುದು ಕಡ್ಡಾಯವಾಗಿದ್ದು, ಪರೀಕ್ಷೆಯ ಕೊನೆಯ ಗಂಟೆ ಬಾರಿಸಿದ ನಂತರ ಅಭ್ಯರ್ಥಿಗಳು ಹೊರಹೋಗಲು ಮಾತ್ರ ಅನುಮತಿ ಇರುತ್ತದೆ ಎಂದು ಕೆಇಎ ಪ್ರಕಟಣೆ ತಿಳಿಸಿದೆ.