ಬೀದಿ ಬದಿಯಲ್ಲಿ ಮೂತ್ರ ವಿಸರ್ಜನೆಗೆ ಮುಜುಗರ ತರುವ ಮೈಸೂರು ಪಾಲಿಕೆಯ ಹೊಸ ಪ್ರಯೋಗ.!
ಮೈಸೂರು: ಮಹಾನಗರ ಪಾಲಿಕೆ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮತ್ತು ಅಶುಚಿತ್ವ ಸಮಸ್ಯೆಗೆ ಅಂತ್ಯವಿಡಲು ವಿನೂತನ ಕ್ರಮಕ್ಕೆ ಮುಂದಾಗಿದೆ. ವಿಶೇಷವಾಗಿ ಬಸ್ ನಿಲ್ದಾಣಗಳ ಸುತ್ತಮುತ್ತಲಿನ ಕಾಂಪೌಂಡ್ ಗೋಡೆಗಳ ಬಳಿ ನಡೆಯುತ್ತಿದ್ದ ಅನಧಿಕೃತ ಮೂತ್ರ ವಿಸರ್ಜನೆ ಮತ್ತು ಅದರ ದುರ್ವಾಸನೆ ನಿಯಂತ್ರಣಕ್ಕಾಗಿ ಈ ಹೊಸ ಯೋಜನೆ ಜಾರಿಗೆ ತರಲಾಗಿದೆ.
ಮೈಸೂರು ಕೇಂದ್ರ ಬಸ್ ನಿಲ್ದಾಣದ ಮುಂಭಾಗದ ಸುಮಾರು 80 ಮೀಟರ್ ಉದ್ದದ ಗೋಡೆಗೆ ಸ್ಟೇನ್‌ಲೆಸ್ ಸ್ಟೀಲ್ ಶೀಟ್ಗಳನ್ನು ಅಳವಡಿಸಲಾಗಿದ್ದು, ಅವು ಕನ್ನಡಿಯಂತೆ ಕಾರ್ಯನಿರ್ವಹಿಸುತ್ತಿವೆ. ಈ ‘ಕನ್ನಡಿ ಗೋಡೆ’ ಮುಂದೆ ಯಾರಾದರೂ ನಿಂತರೆ ಅವರ ಪ್ರತಿಬಿಂಬ ಸ್ಪಷ್ಟವಾಗಿ ಕಾಣುವುದರಿಂದ, ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವವರಿಗೆ ಮುಜುಗರ ಉಂಟಾಗುತ್ತದೆ. ಜೊತೆಗೆ ಹಿಂಭಾಗದಿಂದ ಹಾದುಹೋಗುವ ಜನರಿಗೂ ಅವರ ಕ್ರಿಯೆ ಸ್ಪಷ್ಟವಾಗಿ ಗೋಚರಿಸುತ್ತದೆ. ಇದರಿಂದ ಸಾರ್ವಜನಿಕ ಶಿಸ್ತು ಮತ್ತು ಸ್ವಚ್ಛತೆ ಕಾಪಾಡುವ ಉದ್ದೇಶವನ್ನು ಪಾಲಿಕೆ ಹೊಂದಿದೆ.
ಇದೇ ಪ್ರದೇಶದಲ್ಲಿ ಆಕರ್ಷಕ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗಿದ್ದು, ರಾತ್ರಿ ವೇಳೆಯಲ್ಲೂ ಈ ಗೋಡೆ ಪ್ರಕಾಶಮಾನವಾಗಿ ಕಾಣುತ್ತದೆ. ಸುಮಾರು 9.5 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಆರಂಭಿಸಲಾದ ಈ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪಾಲಿಕೆ ಅಧಿಕಾರಿಗಳ ಪ್ರಕಾರ, ದಂಡ ವಿಧಿಸುವ ಕ್ರಮದಿಂದ ಸಮಸ್ಯೆ ನಿಯಂತ್ರಣವಾಗದ ಹಿನ್ನೆಲೆಯಲ್ಲಿ ಈ ರೀತಿಯ ಮನೋವೈಜ್ಞಾನಿಕ ತಡೆ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ರಾಜ್ಯದಲ್ಲೇ ಇದು ಮೊದಲ ಪ್ರಯೋಗವಾಗಿದ್ದು, ಯಶಸ್ವಿಯಾದರೆ ಇತರ ಪ್ರದೇಶಗಳಿಗೂ ವಿಸ್ತರಿಸುವ ಯೋಜನೆ ಇದೆ.
For More Updates Join our WhatsApp Group :
https://chat.whatsapp.com/JVoHqE476Wn3pVh1gWNAcH




