ವಿದ್ಯಾರ್ಥಿನಿಯರಿಗೆ 250 ಉಚಿತ ಐಎಸ್ಐ ಹೆಲ್ಮೆಟ್ ವಿತರಣೆ.
ಮೈಸೂರು : ಮೈಸೂರು ಸಂಚಾರ ಪೊಲೀಸರು ರಸ್ತೆ ಅಪಘಾತಗಳನ್ನು ತಡೆಗಟ್ಟುವ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಿನೂತನ ಜಾಗೃತಿ ಅಭಿಯಾನವನ್ನು ನಡೆಸಿದ್ದಾರೆ. ಈ ಕಾರ್ಯಕ್ರಮದ ಭಾಗವಾಗಿ, ಮೈಸೂರಿನ ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಹೆಲ್ಮೆಟ್ಗಳನ್ನು ವಿತರಿಸಲಾಯಿತು. ಜೆಎಲ್ಬಿ ರಸ್ತೆಯಲ್ಲಿರುವ ಕಾಲೇಜಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಡಿಸಿಪಿ ಸುಂದರ್ ರಾಜ್ ಅವರು 250 ಪೂರ್ಣ ಮುಖ ಐಎಸ್ಐ ಗುರುತಿನ ಹೆಲ್ಮೆಟ್ಗಳನ್ನು ವಿತರಿಸಿದರು. ಈ ಮೂಲಕ ವಿದ್ಯಾರ್ಥಿನಿಯರು ಸಂಚಾರ ನಿಯಮಗಳನ್ನು ಪಾಲಿಸಬೇಕು ಮತ್ತು ಹೆಲ್ಮೆಟ್ ಧರಿಸುವ ಮಹತ್ವವನ್ನು ಅರಿಯಬೇಕು ಎಂದು ತಿಳಿಸಿದರು.
ಕಳೆದ ಒಂದು ತಿಂಗಳಿಂದ ರಸ್ತೆ ಸಂಚಾರ ಸುರಕ್ಷತಾ ಸಪ್ತಾಹವನ್ನು ಆಚರಿಸುತ್ತಿರುವ ಮೈಸೂರು ಪೊಲೀಸರು, ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದನ್ನು ಮುಖ್ಯ ಆದ್ಯತೆಯಾಗಿ ಪರಿಗಣಿಸಿದ್ದಾರೆ. ಕೆ.ಆರ್. ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಎಸ್.ಡಿ.ಎಂ. ಕಾಲೇಜನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಸುಗುಣ ಎಂಬ ಸಂಸ್ಥೆಯು ಈ ಉಚಿತ ಹೆಲ್ಮೆಟ್ ವಿತರಣಾ ಕಾರ್ಯಕ್ರಮಕ್ಕೆ ಕೈಜೋಡಿಸಿತ್ತು. ಹೆಲ್ಮೆಟ್ ಧರಿಸುವುದಕ್ಕೆ ಯಾಕೆ ಆದ್ಯತೆ ನೀಡಬೇಕು ಎಂಬುದನ್ನು ವಿವರಿಸಿದ ಡಿಸಿಪಿ ಸುಂದರ್ ರಾಜ್, ಸಂಭವಿಸುವ 100 ಅಪಘಾತಗಳಲ್ಲಿ ಶೇಕಡ 75ರಷ್ಟು ದ್ವಿಚಕ್ರ ವಾಹನಗಳ ಸವಾರರೇ ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ಅಂಕಿಅಂಶಗಳ ಮೂಲಕ ತಿಳಿಸಿದರು. ಮಾರಣಾಂತಿಕ ಪ್ರಕರಣಗಳು ವರದಿಯಾಗುವುದರಿಂದ ಇಡೀ ಕುಟುಂಬವೇ ದುಃಖಕ್ಕೆ ಈಡಾಗುತ್ತದೆ ಎಂದು ಅವರು ವಿವರಿಸಿದರು. ಸುಮಾರು ಒಂದು ಗಂಟೆಗಳ ಕಾಲ ವಿದ್ಯಾರ್ಥಿಗಳಿಗೆ ಅಪಘಾತಗಳಿಂದಾಗುವ ದುಷ್ಪರಿಣಾಮಗಳು ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಯಿತು.
For More Updates Join our WhatsApp Group :




