ಕುಖ್ಯಾತ ಕಳ್ಳ ಪಲ್ಸರ್ ಬಾಬು ಬಂಧನ: ಮದುವೆ ಮನೆಗಳೇ ಟಾರ್ಗೆಟ್, 42 ಲಕ್ಷ ರೂ. ವಶ.

ಕುಖ್ಯಾತ ಕಳ್ಳ ಪಲ್ಸರ್ ಬಾಬು ಬಂಧನ: ಮದುವೆ ಮನೆಗಳೇ ಟಾರ್ಗೆಟ್, 42 ಲಕ್ಷ ರೂ. ವಶ

ಸದಾಶಿವನಗರದಲ್ಲಿ ರೆಡ್ ಹ್ಯಾಂಡ್ ನಲ್ಲಿ ಸೆರೆಹಿಡಿತ

ಬೆಂಗಳೂರು: ಮದುವೆ ಸಮಾರಂಭಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಚನ್ನಪಟ್ಟಣ ಮೂಲದ ಕುಖ್ಯಾತ ಕಳ್ಳ ‘ಪಲ್ಸರ್ ಬಾಬು’ ಅಲಿಯಾಸ್ ಬಾಬುನನ್ನು ಬೆಂಗಳೂರಿನ ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆದ ಮದುವೆಯೊಂದರಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದಾಗ ಈತ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಈತನ ವಿರುದ್ಧ ಈಗಾಗಲೇ 19 ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿವೆ. ಅಂದಹಾಗೆ, ಈತ ಈ ಹಿಂದೆ ಕೂಡ ಇಂಥದ್ದೇ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿ ಬಿಡುಗಡೆಯಾಗಿದ್ದ.

ಪಲ್ಸರ್ ಬಾಬುಗೆ ವರದಾನವಾಗಿದ್ದ ಕೊರೊನಾ

ಬಂಧಿತ ಆರೋಪಿ ಪಲ್ಸರ್ ಬಾಬು ವಿವಿಧ ಪೊಲೀಸ್ ಠಾಣೆಗಳ 19ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ. ಈ ಹಿಂದೆ ಈತ ಜೈಲು ಸೇರಿದ್ದ. ಕೊರೊನಾ ಸಮಯದಲ್ಲಿ ಸಣ್ಣಪುಟ್ಟ ಅಪರಾಧಗಳಡಿ ಜೈಲಲ್ಲಿದ್ದ ಸುಮಾರು 2,000 ಕೈದಿಗಳನ್ನು ಬಿಡುಗಡೆ ಮಾಡಿದಾಗ ಪಲ್ಸರ್ ಬಾಬುಗೂ ಹೊರಬರುವ ಅವಕಾಶ ಸಿಕ್ಕಿತ್ತು. ಆದರೆ, ಜೈಲಿನಿಂದ ಹೊರಬಂದ ಮೇಲೆ ಸುಧಾರಿಸುವ ಬದಲು ತನ್ನ ಹಳೆ ಚಾಳಿಯನ್ನೇ ಮುಂದುವರಿಸಿದ್ದ.

42 ಲಕ್ಷ ರೂ. ಮೌಲ್ಯದ ವಸ್ತುಗಳ ಜಪ್ತಿ

ಬಂಧಿತನಿಂದ ಪೊಲೀಸರು ಒಟ್ಟು 42.38 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 2 ಕಾರುಗಳು ಹಾಗೂ 4 ಬೈಕ್‌ಗಳು, 132 ಗ್ರಾಂ ಚಿನ್ನಾಭರಣ, 7 ಮೊಬೈಲ್ ಫೋನ್‌ಗಳು, 1 ಹೈ ಎಂಡ್ ಕ್ಯಾಮರಾ ಮತ್ತು 2 ಲೆನ್ಸ್‌ಗಳು, 2 ಲ್ಯಾಪ್‌ಟಾಪ್‌ಗಳು ಹಾಗೂ 1.20 ಲಕ್ಷ ರೂ. ನಗದು ಸೇರಿವೆ.

ಆರೋಪಿ ಬಂಧನದಿಂದ ಸದಾಶಿವನಗರ, ವರ್ತೂರು, ಜಾಲಹಳ್ಳಿ, ಹೆಣ್ಣೂರು ಹಾಗೂ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಒಟ್ಟು 8 ಪ್ರಕರಣಗಳು ಬೆಳಕಿಗೆ ಬಂದಿವೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *